ಪೌರತ್ವ ಕಾಯ್ದೆ ಕೇಂದ್ರದ ವಿಷಯ, ಆನ್ ಲೈನ್ ಮೂಲಕ ಜಾರಿ: ಕೇಂದ್ರ ಗೃಹ ಸಚಿವಾಲಯ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಆದರೆ...
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಆದರೆ ಉಗ್ರ ಪ್ರತಿಭಟನೆಗೂ ಬಗ್ಗದ ಮೋದಿ ಸರ್ಕಾರ, ಪೌರತ್ವ ಕಾಯ್ದೆ ಕೇಂದ್ರದ ವಿಷಯವಾಗಿದ್ದು, ಅದನ್ನು ಆನ್ ಲೈನ್ ಮೂಲಕ ಅನುಷ್ಠಾನಗೊಳಿಸುವುದಾಗಿ ಹೇಳಿದೆ.

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ, ಪಂಜಾಬ್, ಕೇರಳ, ಮಧ್ಯ ಪ್ರದೇಶ ಮತ್ತು ಛತ್ತೀಗಢ್ ಸರ್ಕಾರಗಳು ಘೋಷಿಸಿವೆ. ಇನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಸೇರಿದಂತೆ ಇತರೆ ರಾಜ್ಯಗಳು ಪೌರತ್ವ ಕಾಯ್ದೆ ಜಾರಿಗೊಳಿಸಬೇಕೆ, ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಿವೆ.

ಈ ಮಧೆ, ಪೌರತ್ವ ಕಾಯ್ದೆ ಕೇಂದ್ರದ ವಿಷಯವಾಗಿದ್ದು, ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯ ಹೊಣೆಗಾರಿಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಆದರೆ ಅಗತ್ಯಬಿದ್ದರೆ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಿದೆ ಮತ್ತು ಇದು ಕೇಂದ್ರ ಪಟ್ಟಿಯಲ್ಲಿರುವುದರಿಂದ ಇದನ್ನು ತಡೆಯುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕಾಯ್ದೆಯನ್ನು ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ ಶಾಸನ ಮಾಡಿದ ನಂತರ ರಾಜ್ಯ ಸರ್ಕಾರಗಳಿಗೆ ಅದನ್ನು ತಿರಸ್ಕರಿಸುವ ಯಾವ ಅಧಿಕಾರವೂ ಇಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ. ಯಾವುದೇ ವ್ಯಕ್ತಿಗೆ ಪೌರತ್ವ ನೀಡುವುದು ಕೇಂದ್ರದ ವಿಶೇಷಾಧಿಕಾರವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com