ಅತ್ಯಾಚಾರ ಪ್ರಕರಣ: ಕೇರಳ ಪಾದ್ರಿ ರಾಬಿನ್ ಗೆ 20 ವರ್ಷ ಕಠಿಣ ಶಿಕ್ಷೆ

ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭಧರಿಸಲು ಕಾರಣನಾಗಿದ್ದ ಮಾಜಿ ಕ್ರೈಸ್ತ ಪಾದ್ರಿ ಫಾದರ್ ರಾಬಿನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಲಸ್ಸೇರಿ: ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭಧರಿಸಲು ಕಾರಣನಾಗಿದ್ದ ಮಾಜಿ ಕ್ರೈಸ್ತ ಪಾದ್ರಿ ಫಾದರ್ ರಾಬಿನ್ ವಡಕ್ಕನ್ ಚೆರಿಲ್ ಅವರಿಗೆ ಕೇರಳದ ತಲಸ್ಸೇರಿ ಪೋಸ್ಕೋ ನ್ಯಾಯಾಲಯ ಶನಿವಾರ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. 
ಫಾದರ್ ರಾಬಿನ್ ವಡಕ್ಕನ ಚೆರಿಲ್ ಅಲಿಯಾಸ್ ಮ್ಯಾಥ್ಯೂ(51) ಕೋಟಿಯೂರುನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಉಸ್ತುವಾರಿ ನೋಡಿಕೊಳ್ಳುವ ಜತೆಗೆ 16 ವರ್ಷದ ಸಂತ್ರಸ್ತೆ ಬಾಲಕಿ ಓದುತ್ತಿದ್ದ ಶಾಲೆಯ ವ್ಯವಸ್ಥಾಪಕನಾಗಿದ್ದರು.
ಸಂತ್ರಸ್ತೆ ಬಾಲಕಿ 2017ರ ಫೆಬ್ರವರಿ 7ರಂದು ಮಗುವಿಗೆ ಜನ್ಮ ನೀಡಿದ್ದಳು. ಡಿಎನ್ ಎ ಪರೀಕ್ಷೆ ನಡೆಸುವ ಮೂಲಕ ಫಾದರ್ ರಾಬಿನ್ ಮಗುವಿನ ಜೈವಿಕ ತಂದೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿತ್ತು.
ತಪ್ಪಿತಸ್ಥ ಕ್ರೈಸ್ತ ಪಾದ್ರಿಗೆ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ವಿವಿಧ ಸೆಕ್ಷನ್ 376 (2-ಎಫ್) ಸೆಕ್ಷನ್ 5 ರಡಿ ನ್ಯಾಯಾಧೀಶ ಪಿ.ಎನ್. ವಿನೋದ್  ಒಟ್ಟು 60 ವರ್ಷಗಳ ಶಿಕ್ಷೆಯ ಜತೆಗೆ  ದಂಡದ ಹಣದಲ್ಲಿ 1.5 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.
ನ್ಯಾಯಾಲಯಕ್ಕೆ ತಪ್ಪು ಹೇಳಿಕೆ ನೀಡಿದ್ದಕ್ಕಾಗಿ ಸಂತ್ರಸ್ತೆಯ ಪೋಷಕರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಾಸಿಕ್ಯೂಷನ್ ದೋಷಾರೋಪಗಳನ್ನು ರುಜುವಾತುಪಡಿಸಲು ವಿಫಲಗೊಂಡಿರುವ ಕಾರಣ ಎರಡನೇ ಸಹ ಆರೋಪಿ ಎನ್ ತಂಕಮ್ಮ ಸೇರಿದಂತೆ ಒಟ್ಟು 10 ಆರೋಪಿಗಳ ಪೈಕಿ ಆರು ಮಂದಿಯನ್ನು ಖುಲಾಸೆಗೊಳಿಸಿದೆ.
ಇದಕ್ಕೂ ಮೊದಲು, ಪ್ರಕರಣದ ವಿಚಾರಣೆಯ ವೇಳೆ, ವೈದ್ಯರು ಸೇರಿದಂತೆ ಮೂವರು ವ್ಯಕ್ತಿಗಳನ್ನು ಸುಪ್ರೀಂ ಕೋರ್ಟ್ ಆರೋಪ ಪಟ್ಟಿಯಿಂದ ಕೈಬಿಟ್ಟಿತ್ತು.
ಫಾದರ್ ರಾಬಿನ್ ಸೂಚನೆಯಂತೆ, ಸಂತ್ರಸ್ತೆ ತನ್ನ ತಂದೆಯೇ ಗರ್ಭ ಧರಿಸಲು ಕಾರಣ ಎಂದು ಹೇಳಿಕೆ ನೀಡಿದ್ದಳು, ನಂತರ ಈ ರೀತಿ ಹೇಳಿಕೆ ನೀಡುವಂತೆ ಫಾದರ್ ರಾಬಿನ್ ಒತ್ತಡ ಹೇರಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಳು.
2016ರ ಮೇ ತಿಂಗಳಲ್ಲಿ ಕಂಪ್ಯೂಟರ್ ಕಲಿಯಲು ಬಾಲಕಿ ಚರ್ಚ್ ಗೆ ತೆರಳಿದ್ದಾಗ ಆರೋಪಿ ಫಾದರ್ ರಾಬಿನ್,  ತನ್ನ ಕೋಣೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಕೆನಡಾಗೆ ಪರಾರಿಯಾಗಲು ತಯಾರಿ ನಡೆಸುತ್ತಿದ್ದಾಗ ಆರೋಪಿಯನ್ನು ತಲಸ್ಸೇರಿಯಲ್ಲಿ ಪೊಲೀಸರು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com