ಅಸ್ಸಾಂ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 127ಕ್ಕೆ ಏರಿಕೆ, 200 ಮಂದಿ ಆಸ್ಪತ್ರೆಯಲ್ಲಿ

ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ನಲ್ಲಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ ಸೋಮವಾರ 127ಕ್ಕೇರಿದ್ದು, ಇನ್ನೂ 200 ಮಂದಿ ಆಸ್ಪತ್ರೆಯಲ್ಲಿ ...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
ಗುವಾಹಟಿ: ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಮೃತಪಟ್ಟವರ ಸಂಖ್ಯೆ ಸೋಮವಾರ 127ಕ್ಕೇರಿದ್ದು, ಇನ್ನೂ 200 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಗುರುವಾರ ರಾತ್ರಿ  ಹಲ್ಮಿರಾ ಟೀ ಎಸ್ಟೇಟ್ ನಲ್ಲಿ ಕಳ್ಳಬಟ್ಟಿ ಸೇವಿಸಿ ಅಸ್ವಸ್ಥರಾಗಿದ್ದ 200ಕ್ಕೂ ಹೆಚ್ಚು ಜನರನ್ನು ಸಮೀಪದ ಸ್ವಾಹಿದ್ ಕುಶಾಲ್ ಕೊನ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳ್ಳಬಟ್ಟಿ ಸೇವನೆಯಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ನಕಲಿ ಮದ್ಯದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೊಲ್ಘಾಟ್ ಮತ್ತು ಜೊರ್ಹಟ್ ಜಿಲ್ಲೆಯಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದು, ಎರಡು ಜಿಲ್ಲೆಗಳ ಸುಮಾರು 200 ಮಂದಿ ಜೊರಹತ್  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ಜೆಎಂಸಿ ಹೆಚ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ. 
ಈ ನಡುವೆ ಕಳ್ಳ ಬಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಜೊರ್ಹಟ್  ನಲ್ಲಿ ಆರು ಮಂದಿ, ಗೊಲ್ಘಾಟ್ ನಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಗೊಲ್ಘಾಟ್  ಜಿಲ್ಲೆಯಲ್ಲಿ  ಕಳ್ಳ ಬಟ್ಟಿ ತಯಾರಿಕೆಗೆ ಬಳಸುತ್ತಿದ್ದ  ಪರಿಕರಗಳನ್ನು ದಾಸ್ತಾನು ಮಾಡಲಾಗಿದ್ದ ಎರಡು ಗೋದಾಮುಗಳನ್ನು  ಪೊಲೀಸರು  ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪ್ರಕರಣದ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಅಸ್ಸಾಂ ವಿಭಾಗೀಯ ಆಯುಕ್ತರಿಗೆ ಸೂಚಿಸಿದ್ದು, ಜೊರ್ಹಟ್ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com