ಮುಜಾಫರಪುರ್ ಸೆಕ್ಸ್ ಹಗರಣ: ಅತ್ಯಾಚಾರಕ್ಕೂ ಮುನ್ನ ಅಶ್ಲೀಲ ಹಾಡಿಗೆ ಡ್ಯಾನ್ಸ್ ಮಾಡುವಂತೆ ಬಾಲಕಿಯರಿಗೆ ಬಲವಂತ - ಸಿಬಿಐ ಚಾರ್ಜ್ ಶೀಟ್

ಬಿಹಾರದ ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ ಭಯಾನಕ ಸಂಗತಿಗಳು ಬಹಿರಂಗವಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ ಭಯಾನಕ ಸಂಗತಿಗಳು ಬಹಿರಂಗವಾಗಿದ್ದು, ಶೆಲ್ಟರ್ ಹೋಮ್ ಗೆ ಬರುತ್ತಿದ್ದ ಅತಿಥಿಗಳು ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಮುನ್ನ ಅಶ್ಲೀಲ ಹಾಡಿಗೆ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡುತ್ತಿದ್ದರು ಎಂದು ಸಿಬಿಐ ಸೋಮವಾರ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ತಿಳಿಸಿದೆ.
ಸದ್ಯ ಪಟಿಯಾಲ ಜೈಲಿನಲ್ಲಿರುವ ಎನ್ ಜಿಎ ಮುಖ್ಯಸ್ಥ ಬ್ರಿಜೇಶ್ ಥಾಕೂರ್ ಹಾಗೂ ಶೆಲ್ಟರ್ ಹೋಮ್ ನ ಏಳು ಮಹಿಳಾ ಸಿಬ್ಬಂದಿ ಸೇರಿದಂತೆ 21 ಆರೋಪಿಗಳ ವಿರುದ್ಧ ಸಿಬಿಐ ಇಂದು ಚಾರ್ಜ್ ಶೀಟ್ ಸಲ್ಲಿಸಿದೆ.
ಶೆಲ್ಟರ್ ಹೋಮ್ ಬಾಲಿಕ ಗೃಹಕ್ಕೆ ತಡ ರಾತ್ರಿ ಬರುತ್ತಿದ್ದ ಪುರುಷ ಅತಿಥಿಗಳನ್ನು ರಂಜಿಸಲು ಅಶ್ಲೀಲ ಹಾಡಿಗೆ ಡ್ಯಾನ್ಸ್ ಮಾಡುವಂತೆ ಅಸಹಾಯಕ ಅಪ್ರಾಪ್ತ ಬಾಲಕಿಯರಿಗೆ ಬಲವಂತ ಮಾಡಲಾಗುತ್ತಿತ್ತು. ಒಂದು ಡ್ಯಾನ್ಸ್ ಮಾಡಲು ನಿರಾಕರಿಸಿದ 7ರಿಂದ 18 ವರ್ಷದ ಬಾಲಕಿಯರಿಗೆ ರಾತ್ರಿ ಊಟಕ್ಕೆ ಕೇವಲ ಚಪಾತಿ ಹಾಗೂ ಉಪ್ಪು ನೀಡುವ ಮೂಲಕ ಶಿಕ್ಷಿಸಲಾಗುತ್ತಿತ್ತು ಎಂದು ಸಿಬಿಐ ತನ್ನ 73 ಪುಟಗಳ ಚಾರ್ಚ್ ಶೀಟ್ ನಲ್ಲಿ ದೂರಿದೆ.
ಶೆಲ್ಟರ್ ಹೋಮ್ ನೋಡಿಕೊಳ್ಳುತ್ತಿದ್ದ ಥಾಕೂರ್ ಮೂರು ಸಣ್ಣ ದಿನಪತ್ರಿಕೆಗಳನ್ನು ನಡೆಸುತ್ತಿದ್ದು, ಆಡಳಿತರೂಢ ಜೆಡಿಯುಗೆ ಆಪ್ತರಾಗಿದ್ದಾರೆ. ಥಾಕೂರ್ ಸಹ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಥಾಕೂರ್ ನಡೆಸುತ್ತಿದ್ದ ಬಾಲಿಕ ಗೃಹದಲ್ಲಿದ್ದ ಕನಿಷ್ಠ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಖಚಿತಪಡಿಸಿದೆ.
ಮುಜಾಫರಪುರದ ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 34 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಅತ್ಯಾಚಾರ ಎಸಗಿದ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಿಬಿಐಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com