ಮುಂಬೈ: ನೀರವ್​ ಮೋದಿಯ ಬೀಚ್ ಬಂಗಲೆ​ ನೆಲಸಮ ಕಾರ್ಯ ಆರಂಭ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​(ಪಿಎನ್ ಬಿ)ಗೆ 13 ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್​ ಮೋದಿಗೆ ಸೇರಿದ...
ನೀರವ್ ಮೋದಿ
ನೀರವ್ ಮೋದಿ
ಮುಂಬೈ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​(ಪಿಎನ್ ಬಿ)ಗೆ 13 ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್​ ಮೋದಿಗೆ ಸೇರಿದ ಮುಂಬೈನ ಆಲಿಬಾಗ್ ​ನಲ್ಲಿರುವ ಬೀಚ್ ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಕೊನೆಗೂ ಶುಕ್ರವಾರ ಆರಂಭವಾಗಿದೆ.
ಅಲಿಬಾಗ್ ಎಸ್ ಡಿಒ ಶಾರದ ಪವಾರ್ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಬಂಗಲೆ ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಒಂದು ವಾರಗಳ ಕಾಲ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿ ಈ ಬಂಗಲೆಯಲ್ಲಿ ಹಲವು ದೇಶ ವಿದೇಶಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ಔತಣಕೂಟ ಆಯೋಜಿಸುತ್ತಿದ್ದರು ಎನ್ನಲಾಗಿದೆ. ಈ ಕಟ್ಟಡದ ಕುರಿತು ತನಿಖೆ ನಡೆಸಿದ್ದ ಆಲಿಗಢ ಜಿಲ್ಲಾಡಳಿತ ಇದು ಅಕ್ರಮ ನಿರ್ಮಾಣದ ಕಟ್ಟಡ ಎಂದು ಘೋಷಿಸಿತ್ತು.
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ವಂಚಿಸಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಜಪ್ತಿ ಮಾಡಿತ್ತು. ಈ ಮನೆಯಲ್ಲಿದ್ದ ಬೆಲಬಾಳುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಗುರುವಾರ ಆಲಿಗಢ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿದೆ. 
ಈ ಕಟ್ಟಡವನ್ನು ಕೆಡವಲು ಜಾರಿ ನಿರ್ದೇಶನಾಲಯ ಒಂದು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು ಎನ್ನಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ, ಒಟ್ಟು 70 ಸಾವಿರ ಚದರಡಿ ವಿಸ್ತೀರ್ಣದ ಜಾಗದಲ್ಲಿ 33 ಸಾವಿರ ಚದರಡಿಯಲ್ಲಿ 2009-10ರಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಲಾಗಿದೆ. 
ನೀರವ್ ಮೋದಿ ಜೊತೆಗೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ 58 ಖಾಸಗಿ ಕಟ್ಟಡಗಳ ಮಾಲಿಕರಿಗೂ ನೊಟೀಸ್ ಜಾರಿಗೊಳಿಸಲಾಗಿತ್ತು. ಅಲಿಬಾಗ್ ಪ್ರದೇಶದಲ್ಲಿ ಅಕ್ರಮವಾಗಿ ಖಾಸಗಿ ಕಟ್ಟಡಗಳನ್ನು ನಿರ್ಮಿಸಿದ್ದವರ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಈ ಹಿಂದಿನ ಆದೇಶದಲ್ಲಿ ಸೂಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com