ಮುಂಬೈ ಮಹಾಮಳೆ: ಉಕ್ಕಿ ಹರಿದ ತಿವಾರೆ ಜಲಾಶಯ, 6 ಮಂದಿ ಸಾವು, 30 ಮಂದಿ ನಾಪತ್ತೆ ಶಂಕೆ

ಎಡೆಬಿಡದೆ ಸುರಿದ ಮಹಾಮಳೆಯಿಂದಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ತಿವಾರೆ ಜಲಾಶಯ ಉಕ್ಕಿ ಹರಿದು ಇಬ್ಬರು ಮೃತಪಟ್ಟಿದ್ದಾರೆ
ಜಲಾವೃತಗೊಂಡ ಮುಂಬೈ
ಜಲಾವೃತಗೊಂಡ ಮುಂಬೈ
ರತ್ನಗಿರಿ: ಎಡೆಬಿಡದೆ ಸುರಿದ ಮಹಾಮಳೆಯಿಂದಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ತಿವಾರೆ ಜಲಾಶಯ ಒಡೆದು ಇಬ್ಬರು ಮೃತಪಟ್ಟಿದ್ದಾರೆ.  ಏಳು ಹಳ್ಳಿಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಜಲಾಶಯದ ಸಮೀಪದಲ್ಲಿದ್ದ 12 ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್ ಹಾಗೂ ಸ್ವಯಂ ಸೇವಕರು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈಯಿಂದ 300 ಕಿಲೋ ಮೀಟರ್ ದೂರದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿ ಚಿಪ್ಲನ್ ಹತ್ತಿರ ತಿವಾರೆ ಎಂಬಲ್ಲಿ ಸಣ್ಣ ಅಣೆಕಟ್ಟು ಧಾರಾಕಾರ ಮಳೆಗೆ ಒಡೆದು ನೀರು ಹೊರಬಂದು ಜಲಾವೃತವಾಗಿ ಕಣ್ಮರೆಯಾದವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. 
ಮುಂಬೈಯ ಮಾಲ್ನಾಡ್   ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಗೋಡೆ ಕುಸಿದು  ಸುಮಾರು 20 ಜನರು ಮೃತಪಟ್ಟಿದ್ದಾರೆ. ರಕ್ಷಣಾ ಅಧಿಕಾರಿಗಳು ಅವಶೇಷಗಳಡಿಯಲ್ಲಿ ಸಿಲುಕಿದ್ದ 15 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ. 
ಮಹಾರಾಷ್ಟ್ರ ವಿವಿಧೆಡೆ ಗೋಡೆ ಕುಸಿತದಿಂದ 9 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಪುಣೆಯಲ್ಲಿ ಗೋಡೆ ಕುಸಿದು ಆರು ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಥಾಣೆ ಜಿಲ್ಲೆಯಲ್ಲಿ ಗೋಡೆಯೊಂದು ಗುಡಿಸಲು ಮೇಲೆ ಬಿದ್ದು, ಮೂವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿ ಲಕ್ಷ್ಮಣ್ ಪವರ್ ಹೇಳಿದ್ದಾರೆ. ಕಾರೊಂದು ಜಲಾವೃತಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ರವೀಂದರ್ ಹೌಳೆ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ನೀರು ಮನೆಗೆ ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಂಗಳವಾರ ಸಾರ್ವತ್ರಿಕ ರಜೆ ದಿನವನ್ನಾಗಿ ಘೋಷಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com