ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ

ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ತ್ರಿವಳಿ ತಲಾಖ್ ನಿಷೇಧಿಸುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019 ನ್ನು ಇಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು. 
ಸುದೀರ್ಘ ಚರ್ಚೆಯ ನಂತರ ತ್ರಿವಳಿ ತಲಾಖ್ ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ ಮಸೂದೆಯ ಪರ 99 ಹಾಗೂ ಮತ್ತು ವಿರುದ್ಧವಾಗಿ 84 ಮತಗಳು ಬಿದ್ದವು. ಈ ಮೂಲಕ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಂತಾಗಿದೆ.
ಅನರೀಕ್ಷಿತ ಬೆಳವಣಿಗೆಯಲ್ಲಿ ತ್ರಿವಳಿ ತಲಾಖ್ ವಿರೋಧಿಸಿದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಎಐಎಡಿಎಂಕೆ ರಾಜ್ಯಸಭೆ ಕಲಾಪದಿಂದ ಹೊರ ನಡೆದಿದ್ದು, ಈ ಮಸೂದೆ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಆರೋಪಿಸಿವೆ.
ಈ ಹಿಂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ತ್ರಿವಳಿ ತಲಾಖ್ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸದಸ್ಯರು  ಸಭಾತ್ಯಾಗ ಮಾಡಿದರು. ಪರಿಣಾಮ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ಪಡೆಯಬೇಕು ಎಂಬ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಅಂಗೀಕರಿಸುವ ಹಾದಿ ಸುಗಮವಾಯಿತು.
ಈ ಮಸೂದೆ ಪ್ರಕಾರ, ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.
ತ್ರಿವಳಿ ತಲಾಖ್ ಮಸೂದೆ ಈ ಹಿಂದೆ ಎರಡು ಬಾರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಈ ಹಿಂದೆ ಎರಡು ಬಾರಿ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಈಗಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಆದರೆ ಜೆಡಿಯು ಮತ್ತು ಎಐಎಡಿಎಂಕೆ ಸಭಾತ್ಯಾಗ ಮಾಡಿದ್ದರಿಂದ ಮಸೂದೆ ಅಂಗೀಕಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com