ರಾಷ್ಟ್ರಮಟ್ಟದಲ್ಲಿ ಆದ್ಯತೆ ಮೇಲೆ ಕೃಷಿ ಸಾಲ ಮನ್ನಾ ಜಾರಿಗೆ ಪಂಜಾಬ್ ಸಿಎಂ ಆಗ್ರಹ

ಫಸಲ್ ಬೀಮಾ ಯೋಜನೆಯನ್ನು ಪರಿವರ್ತನೆ ಮಾಡಿ, ರಾಷ್ಟ್ರಮಟ್ಟದಲ್ಲಿ ಕೃಷಿ ಸಾಲಮನ್ನಾ ಯೋಜನೆಯನ್ನು ಒಂದು ಬಾರಿ ಜಾರಿಗೆ ತಂದು...
ಅಮರೀಂದರ್ ಸಿಂಗ್
ಅಮರೀಂದರ್ ಸಿಂಗ್
ಚಂಡೀಗಢ: ಫಸಲ್ ಬೀಮಾ ಯೋಜನೆಯನ್ನು ಪರಿವರ್ತನೆ ಮಾಡಿ, ರಾಷ್ಟ್ರಮಟ್ಟದಲ್ಲಿ ಕೃಷಿ ಸಾಲಮನ್ನಾ ಯೋಜನೆಯನ್ನು ಒಂದು ಬಾರಿ ಜಾರಿಗೆ ತಂದು, ರೈತರನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡಲು ಪ್ರಥಮ ಆದ್ಯತೆ ನೀಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಸಾಲದ ಮನ್ನಾವನ್ನು ಆದ್ಯತೆಯ ಮೇಲೆ ಪರಿಗಣಿಸಿ ಕಷ್ಟದಲ್ಲಿ ಇರುವ ರೈತರ ನೆರವಿಗೆ ಧಾವಿಸಲು ಕೇಂದ್ರದ ಮೋದಿ ಸರ್ಕಾರ ಕಾಳಜಿ ತೋರಬೇಕು ಎಂದು ಅವರು ಮನವಿ ಮಾಡಿದ್ದಾರೆ. 
ಈ ಸಂಬಂಧ ಪ್ರಧಾನಿ ಮೋದಿಗೆ ಎರಡು ಪತ್ರ ಬರೆದಿರುವ ಅಮರೀಂದರ್ ಸಿಂಗ್ ಅವರು ಪಂಜಾಬ್, ಮಾತ್ರವಲ್ಲದೇ ದೇಶದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಇದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ರೈತರಿಗಾಗಿ ಕೇಂದ್ರ ಸರ್ಕಾರ ಒಂದು ಬಾರಿ ಕೃಷಿ ಸಾಲ ಮನ್ನಾ ಮಾಡಿ ನಂತರ ಕೃಷಿ ನೀತಿ ಮತ್ತು ಕಾರ್ಯಕ್ರಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. 
ಪಂಜಾಬ್ ಸರ್ಕಾರದ ಸೀಮಿತ ಸಂಪನ್ಮೂಲಗಳು ರೈತರ ಎಲ್ಲಾ ಕಷ್ಟಗಳನ್ನು ನಿವಾರಿಸಲು ಸಾಕಾಗುತ್ತಿಲ್ಲ, ಇದಕ್ಕೆ ಕೇಂದ್ರದ ಪೂರಕ ನೆರವು ಅಗತ್ಯವಾಗಿದೆ ಎಂದಿದ್ದಾರೆ.
ರೈತರ ಬವಣೆ ತಪ್ಪಿಸಲು, ಖಾಸಗಿ ಲೇವಾದೇವಿಗಾರರ ಕಪಿಮುಷ್ಠಿಯಿಂದ ರೈತರನ್ನು ಪಾರು ಮಾಡಲು ಮತ್ತು ರೈತರ ಆತ್ಮಹತ್ಯೆ ತಡೆಗಟ್ಟಲು ಸಾಲ ಮನ್ನಾ ಬಹಳ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಮೂಲಕ ರೈತ ಸಮುದಾಯ ಭರವಸೆಯ ಉತ್ತಮ ಗುಣಮಟ್ಟದ ಜೀವನ ನಡೆಸಲು ಸಹಕರಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com