ರಕ್ಷಣಾ ಸಚಿವಾಲಯದಿಂದ ರಾಫೆಲ್ ದಾಖಲೆಗಳು ಕಳುವಾಗಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂಡಲೇ ಕಳುವಾಗಿದೆ. ಈ ಕುರಿತು ನಾವು ಸಧ್ಯದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ....
ರಾಫೆಲ್
ರಾಫೆಲ್
ನವದೆಹಲಿ: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದಲೇ ಕಳುವಾಗಿದೆ. ಈ ಕುರಿತು ನಾವು ಸಧ್ಯದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಇಲಾಖೆಯ ಮಾಜಿ ಅಥವಾ ಹಾಲಿ ಅಧಿಕಾರಿಗಳೇ ಈ ದಾಖಲೆಗಳನ್ನು ಕದ್ದಿರಬಹುದು, ನಾವೀಗಾಗಲೇ ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಕೇಂದ್ರದ ಅಟಾರ್ನಿ ಜನರಲ್,ಕೆಕೆ ವೇಣುಗೋಪಾಲ್ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದಾರೆ.

ರಾಫೆಲ್ ಡೀಲ್ ಗೆ ಸಂಬಂಧಿಸಿ ಕಳೆದ ವರ್ಷ ಡಿಸೆಂಬರ್ 14ರಂದು ತಾನು ನೀಡಿದ್ದ ತೀರ್ಪಿನ ಮರುಪರಿಶೀಲನೆಯನ್ನು ನ್ಯಾಯಾಲಯ ಇಂದು ಕೈಗೆತ್ತಿಕೊಂಡಿದೆ. ಈ ವೇಳೆ ಅರ್ಜಿದಾರ ವಕೀಲ ಪ್ರಶಾಂತ್ ಭೂಷಣ  ಅವರ ಕೈಯಲ್ಲಿರುವ ರಾಫೆಲ್ ದಾಖಲೆಗಳು ಕೇಂದ್ರ ರಕ್ಷಣಾ ಇಲಾಖೆಯಿಂದ ಕಳವಾದದ್ದು ಎಂದು ಸರ್ಕಾರಿ ವಕೀಲರು ಆರೋಪಿಸಿದ್ದಾರೆ.

ಇವು ರಹಸ್ಯ ದಾಖಲೆಗಳಾಗಿದ್ದು ಇದರಲಿನ ಅಂಶಗಳನ್ನು ದೇಶದ ರಕ್ಷಣಾ ಹಿತದೃಷ್ಟಿಯಿಂದ ಬಹಿರಂಗಪಡಿಸುವಂತಿಲ್ಲ. ಹೀಗಾಗಿ ಈಗ ದಾಖಲೆಗಳು ಪ್ರತಿವಾದಿಗಳ ಕೈಸೇರಿರುವುದು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆಯಾಗಿದೆ. ಇವುಗಳನ್ನು ಇಲಾಖೆಯಿಂದ ಕದ್ದೊಯ್ಯಲಾಗಿದ್ದು ಈ ಸಂಬಂಧ ತನಿಖೆಯೂ ನಡೆಯುತ್ತಿದೆ ಎಂದು ಸರ್ಕಾರಿ ಪರ ಅಟಾರ್ನಿ ಜನರಲ್ ಹೇಳಿದ್ದಾರೆ.

ರಾಫೆಲ್ ಒಪ್ಪಂದದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ, ರಕ್ಷಣಾ ವಿಮಾನ ಖರೀದಿ ವ್ಯವಹಾರವನ್ನು ಸಂದೇಹಿಸಲು ಯಾವ ಕಾರಣವಿಲ್ಲ ಎಂದು ಈ ಹಿಂದಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಈ ತೀರ್ಪು ಮರುಪರಿಶೀಲನೆಗೆ ಕೋರಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ,  ಅರುಣ್ ಶೌರಿ, ಪ್ರಶಾಂತ್ ಭೂಷಣ್ ಅವರುಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್14ಕ್ಕೆ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com