ಎಲ್ಒಸಿಯಲ್ಲಿ ನಾಗರಿಕರಿಗೆ ತೊಂದರೆ ಕೊಟ್ಟರೆ ಹುಷಾರ್: ಭಾರತದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಭಾರತ-ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭದ್ರತಾ ಮೂಲಗಳಿಂದ ಸಿಕ್ಕಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತ-ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭದ್ರತಾ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಹೆಚ್ಚುವರಿ ಸೇನಾ ಪಡೆ ಮತ್ತು ಮಿಲಿಟರಿ ಸಾಧನಗಳನ್ನು ಗಡಿ ದೇಶ ಆಫ್ಘಾನಿಸ್ತಾನದಿಂದ ಒಗ್ಗೂಡಿಸಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೂಕ್ಷ್ಮ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ನೋಡುತ್ತಿದೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸಂಭಾವ್ಯ ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಭಾರತೀಯ ಸೇನೆ ನಿನ್ನೆ ಪಾಕ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದೆ. ಯಾವುದೇ ಪ್ರಚೋದನಾಕಾರಿ ಅಥವಾ ದುಸ್ಸಾಹಸದ ವರ್ತನೆಗೆ ಕೈ ಹಾಕಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.
ನೌಶೆರಾ ವಲಯದ ಮುಂದುವರಿದ ಪೋಸ್ಟ್ ಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ 155 ಮಿಲಿ ಮೀಟರ್ ಫಿರಂಗಿ ಬಂದೂಕು ಸಹಾಯದಿಂದ ದಾಳಿ ನಡೆಸಿದಾಗ ಭಾರತೀಯ ಸೇನೆ ಬೋಫೋರ್ಸ್ ಗನ್ ಸಹಾಯದಿಂದ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ನಂತರ ಪಾಕಿಸ್ತಾನಕ್ಕೆ ಭಾರತ ಈ ಎಚ್ಚರಿಕೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೊನ್ನೆ ಮಂಗಳವಾರ ಸೇನಾಧಿಕಾರಿಗಳು ಮಾತುಕತೆ ನಡೆಸಿದ ವೇಳೆ ಎಲ್ಒಸಿಯಲ್ಲಿರುವ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಬೇಡಿ ಎಂದು ಭಾರತ ಎಚ್ಚರಿಕೆ ನೀಡಿತ್ತು. ಸದ್ಯ ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ತಿಳಿಯಾಗಿದೆ ಎಂದು ಸೇನೆ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com