ಜನರ ಮುಂದಿರುವುದು ಎರಡೇ ಆಯ್ಕೆ- ಮೋದಿ ಇಲ್ಲವೇ ಅರಾಜಕತೆ: ಅರುಣ್‍ ಜೇಟ್ಲಿ

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಒಂದೋ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಯ್ಕೆಯಾಗುತ್ತಾರೆ, ಇಲ್ಲವೇ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಹಣಕಾಸು ಸಚಿವ ಅರುಣ್‍ ಜೇಟ್ಲಿ ಹೇಳಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಒಂದೋ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಯ್ಕೆಯಾಗುತ್ತಾರೆ, ಇಲ್ಲವೇ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಹಣಕಾಸು ಸಚಿವ ಅರುಣ್‍ ಜೇಟ್ಲಿ ಹೇಳಿದ್ದಾರೆ.

ರಾಹುಲ್‍ ಗಾಂಧಿ ಓರ್ವ ವಿಫಲ ನಾಯಕ. ಇದು ಹಲವು ಬಾರಿ ಸಾಬೀತಾಗಿದೆ. ದೇಶವನ್ನು ಅಭಿವೃದ್ಧಿ ಹಾಗೂ ಸುರಕ್ಷಿತವಾಗಿಸಲು ಬದ್ಧರಾಗಿರುವ ಮೋದಿ ವಿರುದ್ಧ ಯಾವುದೇ ಒಬ್ಬ ಪ್ರಬಲ ನಾಯಕರಿಲ್ಲ. ಬದಲಿಗೆ, ಹಲವು ನಾಯಕರಿದ್ದು, ಪ್ರತಿಯೊಬ್ಬರು ಇನ್ನೊಬ್ಬರನ್ನು ತುಳಿಯುವ ಪ್ರಯತ್ನದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ, ಮೈತ್ರಿ ಕೂಟಗಳು ಕೇವಲ ತಾತ್ಕಾಲಿಕ ಸರ್ಕಾರದ ಭರವಸೆಯನ್ನಷ್ಟೇ ನೀಡಬಲ್ಲವು.ಇದು ಅರಾಜಕತೆಗೆ ಎಡೆ ಮಾಡುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಜನರ ಮುಂದೆ ಸ್ಪಷ್ಟ ಆಯ್ಕೆಯಿದೆ.ಮೋದಿ ಇಲ್ಲವೇ ಅರಾಜಕತೆ ಎಂದು ಅವರು ತಮ್ಮ ಫೇಸ್‍ ಬುಕ್‍ ನಲ್ಲಿನ ಬ್ಲಾಗ್  ‘ಅಜೆಂಡ 2019- ಭಾಗ 1 : ನಾಯಕತ್ವದ ವಿಷಯ’ ಎಂಬ ಬರಹದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿ ವಿರುದ್ಧ ಕಿಡಿಕಾರಿರುವ ಜೇಟ್ಲಿ, ರಾಹುಲ್‍ ಗಾಂಧಿ ನಾಯಕನಾಗಲು ಪ್ರಯತ್ನಿಸಿ, ಸೋಲು ಅನುಭವಿಸಿದ್ದಾರೆ. ರಾಜಕೀಯ ಹಾಗೂ ಸಮಾಜದ ಸೂಕ್ಷ್ಮಗಳನ್ನು ಅರಿಯುವಲ್ಲಿ ಅವರ ವಿಫಲತೆ ಭಯ ಹುಟ್ಟಿಸುತ್ತದೆ.ಈ ಅರಾಜಕತೆಯ ಗುಂಪಿಗೆ ಅವರು ನಾಯಕನಾಗಲು ಹವಣಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ

ತೃಣಮೂಲ ಕಾಂಗ್ರೆಸ್‍ ನಾಯಕ ಮಮತಾ ಬ್ಯಾನರ್ಜಿ ಅವರು ಈ ಮೈತ್ರಿಗೆ ಸೂತ್ರದಾರರು. ಕಾಂಗ್ರೆಸ್ ಇಲ್ಲವೇ ಎಡಪಕ್ಷಗಳ ನೆರವಿಲ್ಲದೆ ಅವರು ಪಶ್ಚಿಮ ಬಂಗಾಲದಲ್ಲಿ ಒಂದು ಸ್ಥಾನವನ್ನು ಕೂಡ ಗಳಿಸಲು ಸಾಧ್ಯವಿಲ್ಲ. ಆದರೂ, ಅವರು ಮೈತ್ರಿಯ ನೇತೃತ್ವ ವಹಿಸಲು ಆಸಕ್ತಿ ತೋರುತ್ತಿದ್ದಾರೆ ಎಂದಿದ್ದಾರೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆಗೆಯಲು ಕೂಡ ವಿಫಲವಾಗಿದ್ದ ಬಿಎಸ್‍ ಪಿ ನಾಯಕಿ ಮಾಯಾವತಿ, ಈ ಬಾರಿ ಚಾಣಾಕ್ಷ ಆಟವಾಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಹೊರಬಿದ್ದ ನಂತರವಷ್ಟೇ ತನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕಾಗಿ ಅವರು ಸಮಾಜವಾದಿ ಪಕ್ಷದೊಂದಿಗೆ ಒತ್ತಾಯಪೂರ್ವಕ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೇಟ್ಲಿ ವಿಶ್ಲೇಷಿಸಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸ್ಪಷ್ಟ ಚಿತ್ರಣವಿಲ್ಲ.ಅದು ಸಂಪೂರ್ಣ ದುರ್ಬಲವಾಗಿದೆ. ಯಾವೊಂದು ಪಕ್ಷವೂ ಅತಿ ಹೆಚ್ಚು ಸ್ಥಾನ ಗಳಿಸುವ ಶಕ್ತಿ ಹೊಂದಿಲ್ಲ. ಇದು ಪ್ರತಿಯೊಬ್ಬರೂ ತಮ್ಮ ಲಾಭಕ್ಕಾಗಿ ಮಾಡಿಕೊಂಡಿರುವ ಮೈತ್ರಿ. ಅವುಗಳ ಸಿದ್ಧಾಂತಗಳು ಇತರ ಪಕ್ಷಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಮೋದಿ ನೇತೃತ್ವದ ಎನ್ ಡಿಎ ಬಹುಮತ ಸಾಧಿಸಲಿದ್ದು, ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಅವರ ನಾಯಕತ್ವವನ್ನು ಈಗಾಗಲೇ ದೇಶ ಒಪ್ಪಿಕೊಂಡಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com