ರಾವಣ ರಾಜ್ಯವಾದ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧವಾದರೆ, ರಾಮ ರಾಜ್ಯವಾದ ಭಾರತದಲ್ಲಿ ಏಕೆ ಸಾಧ್ಯವಿಲ್ಲ?:ಶಿವಸೇನೆ ಪ್ರಶ್ನೆ

ಭಯೋತ್ಪಾದಕ ದಾಳಿ ನಡೆದು 253 ಮಂದಿ ಅಮಾಯಕ ನಾಗರಿಕರು ಶ್ರೀಲಂಕಾದಲ್ಲಿ ಕೆಲ ದಿನಗಳ ಹಿಂದೆ ಪ್ರಾಣ ಕಳೆದುಕೊಂಡ ನಂತರ ಅಲ್ಲಿನ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಭಯೋತ್ಪಾದಕ ದಾಳಿ ನಡೆದು 253 ಮಂದಿ ಅಮಾಯಕ ನಾಗರಿಕರು ಶ್ರೀಲಂಕಾದಲ್ಲಿ ಕೆಲ ದಿನಗಳ ಹಿಂದೆ ಪ್ರಾಣ ಕಳೆದುಕೊಂಡ ನಂತರ ಅಲ್ಲಿನ ಸರ್ಕಾರ ಮುಸ್ಲಿಂ ಮಹಿಳೆಯರು ಸಾರ್ವಜನಿಕವಾಗಿ ಓಡಾಡುವಾಗ ಬುರ್ಖಾ ಧರಿಸದಂತೆ ನಿಷೇಧ ಹೇರಿದ ನಂತರ ಇದೀಗ ಭಾರತದಲ್ಲಿ ಕೂಡ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸದಂತೆ ನಿಷೇಧ ಹೇರಬೇಕೆಂದು ಕರೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಹಾದಿಯನ್ನು ಅನುಸರಿಸಬೇಕು. ದೇಶದ ಭದ್ರತೆಗೆ ಧಕ್ಕೆಯಾದ ಬುರ್ಖಾ ಮತ್ತು ಇತರ ಮುಖವನ್ನು ಮುಚ್ಚುವಂತಹ ಉಡುಪುಗಳನ್ನು ಧರಿಸುವುದಕ್ಕೆ ನಿಷೇಧ ಹೇರಬೇಕು ಎಂದು ತನ್ನ ಮುಖವಾಣಿ ಸಾಮ್ನಾ ಮತ್ತು ದೋಪಹರ್ ಕ ಸಾಮಾನದಲ್ಲಿ ಒತ್ತಾಯಿಸಿದೆ.
ಬುರ್ಖಾ ಧರಿಸಿದರೆ ಮುಖ, ದೇಹವೆಲ್ಲವೂ ಸಂಪೂರ್ಣವಾಗಿ ಮುಚ್ಚಿ ಹೋಗುವುದರಿಂದ ಜನರನ್ನು ಗುರುತು ಹಿಡಿಯುವುದು ಕಷ್ಟವಾಗುತ್ತದೆ. ಇದರಿಂದ ದೇಶದ ಸುರಕ್ಷತೆಗೆ ಧಕ್ಕೆಯುಂಟಾಗಬಹುದು.ದೇಶದ ರಕ್ಷಣೆಯ ತುರ್ತು ಕ್ರಮವಾಗಿ ನಿಷೇಧ ಹೇರಲು ಶ್ರೀಲಂಕಾ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಭಾರತದಲ್ಲಿ ಕೂಡ ಜಾರಿಗೆ ತರಬೇಕು ಎಂದು ಹೇಳಿದೆ.
ಬುರ್ಖಾ ನಿಷೇಧ ರಾವಣನ ಸಾಮ್ರಾಜ್ಯವಾದ ಶ್ರೀಲಂಕಾದಲ್ಲಿ ಸಾಧ್ಯವಾಗಿದೆ. ರಾಮನ ಅಯೋಧ್ಯೆಯಲ್ಲಿ ಜಾರಿಗೆ ಬರುವುದು ಯಾವಾಗ? ಪ್ರಧಾನಿ ಮೋದಿಯವರು ಇಂದು ಅಯೋಧ್ಯೆಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆಯನ್ನು ಕೇಳುತ್ತೇವೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಆದರೆ ಶಿವಸೇನೆಯ ಈ ಪ್ರಸ್ತಾಪವನ್ನು ಎನ್ ಡಿಎ ಸರ್ಕಾರದಲ್ಲಿ ಸಚಿವರಾಗಿರುವ ರಾಮದಾಸ್ ಅತವಾಲೆ ತಳ್ಳಿ ಹಾಕಿದ್ದಾರೆ. ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಬಾರದು ಎಂದು ಹೇಳಿದೆ.
ಬುರ್ಖಾ ಧರಿಸಿದ ಮಹಿಳೆಯರೆಲ್ಲರೂ ಭಯೋತ್ಪಾದಕರು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಬುರ್ಖಾವನ್ನು ದುರುಪಯೋಗಪಡಿಸಿಕೊಳ್ಳುವವರು ಇದ್ದಾರೆ. ಅವರಿಗೆ ಶಿಕ್ಷೆಯಾಗಬೇಕು. ಭಾರತದಲ್ಲಿ ಬುರ್ಖಾಗೆ ನಿಷೇಧ ಹೇರಬಾರದು, ಅದು ಮುಸ್ಲಿಂ ಧರ್ಮದ ಸಂಸ್ಕೃತಿ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅತವಾಲೆ ತಿಳಿಸಿದ್ದಾರೆ.
ಮಸೀದಿಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ದೇಶದ ಭದ್ರತೆ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲು ಶ್ರೀಲಂಕಾ ಸರ್ಕಾರ ಯೋಜಿಸುತ್ತಿದ್ದು ಈ ಕುರಿತಂತೆ ಸರ್ಕಾರದ ಹಲವು ಸಚಿವರುಗಳು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಜೊತೆ ಮಾತುಕತೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com