ಅನಾರೋಗ್ಯದ ಕಾರಣ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಬೇಡ: ಪ್ರಧಾನಿ ಮೋದಿಗೆ ಅರುಣ್ ಜೇಟ್ಲಿ ಪತ್ರ

ಅನಾರೋಗ್ಯ ಹಿನ್ನಲೆಯಲ್ಲಿ ಎನ್ ಡಿಎ 2 ಸರ್ಕಾರದಲ್ಲಿ ತಮಗೆ ಸಚಿವ ಹುದ್ದೆ ಬೇಡವೆಂದು ಎಂದು ಕೇಂದ್ರ ಹಣಕಾಸು ಸಚಿವ...

Published: 29th May 2019 12:00 PM  |   Last Updated: 29th May 2019 02:59 AM   |  A+A-


Arun Jaitley

ಅರುಣ್ ಜೇಟ್ಲಿ

Posted By : SUD SUD
Source : PTI
ನವದೆಹಲಿ: ಅನಾರೋಗ್ಯ ಹಿನ್ನಲೆಯಲ್ಲಿ ಎನ್ ಡಿಎ 2 ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಬೇಡವೆಂದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ತಮಗೆ ಈ ಬಾರಿ ಸಚಿವ ಹುದ್ದೆ ನೀಡಬಾರದು, ಬೇರೆಯವರಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಈವರೆಗೆ ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮೋದಿ ಅವರಿಗೆ ಜೇಟ್ಲಿ ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ನನ್ನ ಚಿಕಿತ್ಸೆಗೆ ಮತ್ತು ಆರೋಗ್ಯ ಸುಧಾರಿಸಿಕೊಳ್ಳಲು ಕೆಲ ಸಮಯಗಳು ಬೇಕಾಗಿದೆ. ಹೀಗಾಗಿ ಹೊಸ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ದನಿಲ್ಲ ಎಂದು ಮೋದಿಯವರಿಗೆ ಬರೆದ ಪತ್ರದಲ್ಲಿ ಅರುಣ್ ಜೇಟ್ಲಿ ಕಾರಣ ಹೇಳಿದ್ದಾರೆ.

66 ವರ್ಷದ ಜೇಟ್ಲಿ ಕಳೆದ ಮೂರು ವಾರಗಳಿಂದ ತಮ್ಮ ಕಚೇರಿಗೆ ಕೆಲಸಕ್ಕೆ ಬಂದಿರಲಿಲ್ಲ. ಅನಾರೋಗ್ಯದ ಹಿನ್ನಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಮೂಲತಃ ವಕೀಲರಾಗಿದ್ದ ಅರುಣ್ ಜೇಟ್ಲಿ ಮೋದಿ ಸಂಪುಟದಲ್ಲಿ ಪ್ರಭಾವಶಾಲಿ ನಾಯಕರಾಗಿ ಪ್ರಮುಖ ಖಾತೆ ವಹಿಸಿಕೊಂಡಿದ್ದರು. ಸರ್ಕಾರದ ಟ್ರಬಲ್ ಶೂಟರ್ ಆಗಿಯೂ ಜನಪ್ರಿಯರಾಗಿದ್ದರು.

ಅರುಣ್ ಜೇಟ್ಲಿಯವರು ಹಣಕಾಸು ಸಚಿವರಾಗಿದ್ದಾಗಲೇ ಪ್ರಮುಖ ಶಾಸನಗಳಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ), ತ್ರಿವಳಿ ತಲಾಖ್ ಮೊದಲಾದವುಗಳನ್ನು ಜಾರಿಗೆ ತಂದಿದ್ದರು. ಈ ವರ್ಷ ಅನಾರೋಗ್ಯದ ಕಾರಣದಿಂದಾಗಿ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ,

ಕಳೆದ ಬಾರಿ 2014ರಲ್ಲಿ ಅಮೃತಸರದಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಲ್ಲಿ ಹಲವು ವರ್ಷಗಳ ಕಾಲ ವಕ್ತಾರರಾಗಿ ಕೆಲಸ ಮಾಡಿದ್ದರು.

47ನೇ ವಯಸ್ಸಿನಲ್ಲಿ ಸಂಸತ್ತು ಪ್ರವೇಶಿಸಿದ ಅರುಣ್ ಜೇಟ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಿಂದ ರಾಜ್ಯಸಭೆ ಪ್ರವೇಶಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ, 2014ರಲ್ಲಿ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ, ಅಲ್ಪಾವಧಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿಯೂ ನಿರ್ವಹಿಸಿದ್ದರು.

ಕಳೆದ ಜನವರಿ 22ರಂದು ಎಡಗಾಲಿನಲ್ಲಿ ಮೃದು ಅಂಗಾಶ ಕ್ಯಾನ್ಸರ್ ಸಮಸ್ಯೆ ತಲೆದೋರಿ ಅಮೆರಿಕಾದಲ್ಲಿ ಸರ್ಜರಿಗೊಳಗಾಗಿದ್ದರು. ಹೀಗಾಗಿ ಕಳೆದ ಮೋದಿ ಸರ್ಕಾರದ 6ನೇ ಮತ್ತು ಕೊನೆಯ ಬಜೆಟ್ ನ್ನು ಮಂಡಿಸಲು ಸಾಧ್ಯವಾಗಿರಲಿಲ್ಲ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಂಗಾಮಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದರು.

ದೇಶದ 17ನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರು ನಾಳೆ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು ಅವರ ಜೊತೆ ನೂತನ ಸಚಿವ ಸಂಪುಟಕ್ಕೆ ಸಚಿವರುಗಳ ಪ್ರಮಾಣವಚನ ನಡೆಯಲಿದೆ.
Stay up to date on all the latest ರಾಷ್ಟ್ರೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp