ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಹ್ಲಾದ ಜೋಶಿ ಪ್ರಮಾಣ

ಧಾರವಾಡ ಬಿಜೆಪಿ ಸಂಸದ ಹಾಗೂ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಗುರುವಾರ ಕೇಂದ್ರ ಸಚಿವರಾಗಿ...
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
ನವದೆಹಲಿ: ಧಾರವಾಡ ಬಿಜೆಪಿ ಸಂಸದ ಹಾಗೂ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಗುರುವಾರ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸತತ ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜೋಶಿ ಅವರು ಮೊದಲ ಬಾರಿ ಕೇಂದ್ರ ಸಚಿವರಾಗಿದ್ದಾರೆ.
ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಹ್ಲಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಧಾರವಾಡದ ವೆಂಕಟೇಶ್ ಜೋಶಿ ಹಾಗೂ ಮಾಲತಿ ಬಾಯಿ ದಂಪತಿಯ ಮಗನಾಗಿ 1962ರಲ್ಲಿ ವಿಜಯಪುರದಲ್ಲಿ ಜನಿಸಿದ ಪ್ರಹ್ಲಾದ್ ಜೋಶಿ, ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು. 
1992ರಲ್ಲಿ ಬಾಗಲಕೋಟೆ ಜಿಲ್ಲೆಯ ಐಹೊಳೆಯ ಜ್ಯೋತಿ ಅವರೊಂದಿಗೆ ಜೋಶಿ ಅವರ ವಿವಾಹವಾಯಿತು. ದಂಪತಿಗೆ ಮೂವರು ಪುತ್ರಿಯರಿದ್ದಾರೆ. 
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಮುಖ್ಯಸ್ಥರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಪ್ರಹ್ಲಾದ ಜೋಶಿ, ಉತ್ತಮ ಸಂಸದೀಯ ಪಟು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಹಂಗಾಮಿ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತ ಇರುವ ಅವರು ಈ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೂಲತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಾದ ಜೋಶಿ, ಹುಬ್ಬಳ್ಳಿಯಲ್ಲಿ ರಾಷ್ಟ್ರ ಧ್ವಜ ಹೋರಾಟ ಸಮಿತಿ ಸಂಚಾಲಕರಾಗಿ ರಾಜ್ಯ ಹಾಗೂ ದೇಶದ ಗಮನ ಸೆಳೆದರು. 1992- 1994ರಲ್ಲಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ನಾಯಕರಾಗಿ ಹೊರಹೊಮ್ಮಿದ್ದರು. 2004ರಿಂದ ಲೋಕಸಭೆಯಲ್ಲಿ ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 
ಧಾರವಾಡಕ್ಕೆ ಐಐಟಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ, ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಜೋಶಿಯವರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com