ನಾಳೆ 'ಮಹಾ'ಭವಿಷ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ 

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತು ಸೋಮವಾರ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. 
ನಾಳೆ 'ಮಹಾ'ಭವಿಷ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ 

ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತು ಸೋಮವಾರ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. 


ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಇಂದು ಬೆಳಗ್ಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.


ಮಹಾ ಸರ್ಕಾರ ರಚನೆ ಕುರಿತ ಮಹಾಡ್ರಾಮಾ ಇಂದು ಕೂಡ ಮುಂದುವರಿದಿದ್ದು ನ್ಯಾಯಾಲಯದಲ್ಲಿ ಹಿರಿಯ ವಕೀಲರು ವಾದ-ಪ್ರತಿವಾದಗಳನ್ನು ನಡೆಸಿದರು. ಎಲ್ಲರ ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ನಾಳೆಗೆ ತೀರ್ಪು ಕಾಯ್ದಿರಿಸಿದೆ. 

ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಕೋರಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿರುವುದರಿಂದ ಸೋಮವಾರ ನ್ಯಾಯಾಲಯದಲ್ಲಿ ತೀವ್ರ ವಾದ-ಪ್ರತಿವಾದ ನಡೆಯಿತು. ಅದರ ಹೈಲೈಟ್ಸ್ ಹೀಗಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದೇನು?:
ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್(ಎಸ್ ಜಿ) ತುಷಾರ್ ಮೆಹ್ತಾ ಇಡೀ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡಲು ಸಮಯಾವಕಾಶ ಕೇಳಿದರು.


ನನ್ನ ಬಳಿ ಮೂಲ ದಾಖಲೆಗಳು ಇವೆ ಎಂದು ಎಸ್ ಜಿ ಅಜಿತ್ ಪವಾರ್ ಮತ್ತು ಸ್ವತಂತ್ರ ಶಾಸಕರು ಸಹಿ ಮಾಡಿದ ಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.


ನವೆಂಬರ್ 22ರಂದು ಅಜಿತ್ ಪವಾರ್ ಗವರ್ನರ್ ಅವರಿಗೆ ಬರೆದ ಪತ್ರದಲ್ಲಿ  ಸ್ಥಿರ ಸರ್ಕಾರದ ಅವಶ್ಯಕತೆಯಿದ್ದು ರಾಷ್ಟ್ರಪತಿ ಆಡಳಿತ ಮುಂದುವರಿಯುವುದು ಒಳ್ಳೆಯದಲ್ಲ ಎಂದಿದ್ದಾರೆ. ಬಿಜೆಪಿ ಅದಕ್ಕೂ ಮುನ್ನ ಅಜಿತ್ ಪವಾರ್ ಬಳಿ ಸರ್ಕಾರ ರಚನೆಗೆ ಆಹ್ವಾನಿಸಿದ್ದಾಗ ಅವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರ ಬೆಂಬಲವಿರಲಿಲ್ಲ.


ಅಜಿತ್ ಪವಾರ್ ನೇತೃತ್ವದಲ್ಲಿ ಶಾಸಕರ ಬೆಂಬಲ ಬಿಜೆಪಿಗೆ ಇದೆ ಎಂದು ಗೊತ್ತಾದ ಕೂಡಲೇ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಪತ್ರ ಬರೆದು ರಾಷ್ಟ್ರಪತಿ ಆಡಳಿತ ಹಿಂಪಡೆಯುವಂತೆ ಕೋರಿದರು. ಅತಿದೊಡ್ಡ ಪಕ್ಷವಾದ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದರು.


-ದೇವೇಂದ್ರ ಫಡ್ನವಿಸ್ ಅವರಿಗೆ 170 ಶಾಸಕರ ಬೆಂಬಲ ಇದೆ. ಅಜಿತ್ ಪವಾರ್ ನೇತೃತ್ವದ ಶಾಸಕರ ಬೆಂಬಲ ಮತ್ತು 11 ಇತರ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.


ಅಜಿತ್ ಪವಾರ್ ಅವರ ಹೇಳಿಕೆಯಲ್ಲಿ ಯಾವುದೇ ಸುಳ್ಳಿನ ಅಂಶ ಗವರ್ನರ್ ಗೆ ಕಂಡುಬರಲಿಲ್ಲ ಎಂದು ಹೇಳುವ ಮೂಲಕ ವಾದ ಮುಗಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ.


ದೇವೇಂದ್ರ ಫಡ್ನವಿಸ್ ಬಿಜೆಪಿ ಪರ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ ವಾದ:
ಒಬ್ಬ ಪವಾರ್ ನಮ್ಮ ಜೊತೆಗಿದ್ದಾರೆ, ಮತ್ತೊಬ್ಬ ಪವಾರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಅವರ ಕೌಟುಂಬಿಕ ಕಲಹವೇ ಅಥವಾ ಬೇರೇನು? ನಾವಲ್ಲ, ಕುದುರೆ ವ್ಯಾಪಾರದಲ್ಲಿ ತೊಡಗಿದ್ದು ಇಲ್ಲಿ ಅರ್ಜಿ ಹಾಕಿದವರು.


ಗವರ್ನರ್ ಕ್ರಮ ಸರಿಯಾಗಿದೆ. ಬಹುಮತ ಸಾಬೀತಿಗೆ ಸಮಯಾವಕಾಶ ನೀಡುವುದು ಗವರ್ನರ್ ವಿವೇಚನೆಗೆ ಬಿಟ್ಟ ನಿರ್ಧಾರ. ಇದು ಸುಪ್ರೀಂ ಕೋರ್ಟ್ ನ ವ್ಯಾಪ್ತಿಗೆ ಬರುವುದಿಲ್ಲ.ಅದನ್ನು ನಡೆಸುವ ವಿಶೇಷ ಅಧಿಕಾರ ಇರುವುದು ಸ್ಪೀಕರ್ ಅವರಿಗೆ.


ನಮಗೆ ಎರಡು-ಮೂರು ದಿನ ಸಮಯ ಕೊಡಿ, ನಾವು ಉತ್ತರ ಕೊಡುತ್ತೇವೆ. ನವೆಂಬರ್ 23ರಂದು ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರು ವಿವೇಚನೆ ಮೆರೆದಿದ್ದಾರೆ.


ಆಗ ಮಧ್ಯೆ ಪ್ರವೇಶಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಫಡ್ನವಿಸ್ ಬಹುಮತ ಹೊಂದಿದೆಯೇ ಎಂದು ಸದನದಲ್ಲಿ ಬಹುಮತ ಸಾಬೀತು ವೇಳೆ ನಿರ್ಧಾರವಾಗಬೇಕು. ಬಹುತೇಕ ಕೇಸುಗಳಲ್ಲಿ ಸದನ ಪರೀಕ್ಷೆಗಳನ್ನು ಪ್ರಮಾಣವಚನ ಸ್ವೀಕರಿಸಿ 24 ಗಂಟೆಗಳೊಳಗೆ ಮಾಡಲಾಗಿದೆ. ಇನ್ನು ಕೆಲವು ಕೇಸುಗಳಲ್ಲಿ 48 ಗಂಟೆ ತೆಗೆದುಕೊಳ್ಳಲಾಗಿದೆ.

ಅಜಿತ್ ಪವಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್: ರಾಜ್ಯಪಾಲರಿಗೆ ಶಾಸಕರ ಬೆಂಬಲವಿರುವ ಪತ್ರ ನೀಡಿದ ದಿನ ದೇವೇಂದ್ರ ಫಡ್ನವಿಸ್ ಗೆ ಬೆಂಬಲ ನೀಡಲು ಅಧಿಕೃತ ಅವಕಾಶ ಸಿಕ್ಕಿತು. ನಮ್ಮ ಕುಟುಂಬದೊಳಗಿನ ಕಲಹವನ್ನು ನಾವು ಎನ್ ಸಿಪಿಯೊಳಗೆ ಬಗೆಹರಿಸುತ್ತೇವೆ. 


ಹಿರಿಯ ವಕೀಲ ಕಪಿಲ್ ಸಿಬಲ್ ಕಾಂಗ್ರೆಸ್, ಶಿವಸೇನೆ, ಎನ್ ಸಿಪಿ ಪರ ವಾದ: 
ನಾವು ಮೂರೂ ಪಕ್ಷಗಳು ನವೆಂಬರ್ 23ರಂದು ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತಿದ್ದೆವು. ಅಷ್ಟು ತರಾತುರಿಯಲ್ಲಿ ಬೆಳಗ್ಗೆ 5 ಗಂಟೆಗೆ ರಾಷ್ಟ್ರಪತಿ ಆಡಳಿತ ಹಿಂಪಡೆದು ಪ್ರಮಾಣವಚನ ಸ್ವೀಕರಿಸುವ ತರಾತುರಿ ಏನಿತ್ತು? ನಮ್ಮಲ್ಲಿ 54 ಎನ್ ಸಿಪಿ ಶಾಸಕರು ಸಹಿ ಹಾಕಿದ ಅಫಿಡವಿಟ್ಟು ಇದೆ.


54 ಶಾಸಕರ ಬೆಂಬಲವಿದೆ ಎಂದು ಹೇಳುವ ಅಜಿತ್ ಪವಾರ್ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ನಮ್ಮಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನ 154 ಶಾಸಕರ ಬೆಂಬಲವಿದೆ. 


ಬಹುಮತ ಸಾಬೀತು 24 ಗಂಟೆಯೊಳಗೆ ಆಗಬೇಕು. ವಿಡಿಯೊಗ್ರಫಿ ಮತ್ತು ಸಿಂಗಲ್ ಬ್ಯಾಲೆಟ್ ಮೂಲಕ ಸದನದ ಹಿರಿಯ ಸದಸ್ಯರು ಅದನ್ನು ನಡೆಸಬೇಕು. ಹಗಲು ಹೊತ್ತಿನಲ್ಲಿ ಪಾರದರ್ಶಕವಾಗಿ ಬಹುಮತ ಸಾಬೀತು ಆಗಬೇಕು.


ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ: ಅಜಿತ್ ಪವಾರ್ ಅವರಿಗೆ ಶಾಸಕರು ಬೆಂಬಲ ಕೊಟ್ಟಿದ ಸಹಿ ಇರುವ ಪತ್ರ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿದ್ದೆ ಹೊರತು ಬಿಜೆಪಿಗೆ ಬೆಂಬಲ ನೀಡಿದ ಪತ್ರವಲ್ಲ. ಪ್ರಜಾಪ್ರಭುತ್ವಕ್ಕೆ ಎಸಗಿದ ಮೋಸವಿದು.


ಎರಡೂ ಕಡೆಯವರು ಸದನದಲ್ಲಿ ಬಹುಮತ ಸಾಬೀತುಪಡಿಸಲು ಮುಕ್ತವಾಗಿರುವಾಗ ವಿಳಂಬ ಮಾಡುವುದೇಕೆ? ಇಲ್ಲಿ ಯಾರಾದರೊಬ್ಬ ಎನ್ ಸಿಪಿ ಶಾಸಕರು ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದಿದ್ದಾರೆಯೇ? ಬಿಜೆಪಿ ಬೆಂಬಲಿಸಿ ಪತ್ರಗಳು ಇವೆಯೇ, ಇದು ಪ್ರಜಾಪ್ರಭುತ್ವದ ಕಗ್ಗೊಲೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com