ಮಹಾ ವಿಕಾಸ ಮೈತ್ರಿಕೂಟದ ನಾಯಕನಾಗಿ ಉದ್ಧವ್ ಠಾಕ್ರೆ ಆಯ್ಕೆ, ಸಿಎಂ ಆಗಿ ಭಾನುವಾರ ಪ್ರಮಾಣ ಸಾಧ್ಯತೆ

ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಶಾಸಕರು 'ಮಹಾ ವಿಕಾಸ ಅಘಡಿ' ಮೈತ್ರಿಕೂಟದ ನಾಯಕನಾಗಿ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿದ್ದು, ಭಾನುವಾರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಶಾಸಕರು 'ಮಹಾ ವಿಕಾಸ ಅಘಡಿ' ಮೈತ್ರಿಕೂಟದ ನಾಯಕನಾಗಿ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿದ್ದು, ಭಾನುವಾರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇಂದು ಸಂಜೆ ಖಾಸಗಿ ಹೋಟೆಲ್ ನಲ್ಲಿ ನಡೆದ ಮೂರು ಪಕ್ಷಗಳ ಶಾಸಕರ ಸಭೆಯಲ್ಲಿ ಮಹಾರಾಷ್ಟ್ರ ಎನ್ ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಅವರು, ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಉದ್ಧವ್ ಠಾಕ್ರೆ ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಮೂರು ಪಕ್ಷಗಳ ಶಾಸಕರು ಒಪ್ಪಿಗೆ ಸೂಚಿಸಿದರು.

ಮಹಾ ವಿಕಾಸ ಮೈತ್ರಿಕೂಟದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ. ಇದಕ್ಕಾಗಿ ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಉದ್ಧವ್ ಠಾಕ್ರೆ ಅವರು ಭಾನುವಾರ ಶಿವಾಜಿ ಪಾರ್ಕ್ ನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇಂದು ಬೆಳಗ್ಗೆಯಷ್ಟೇ ನಾಳೆ ಸಂಜೆ ಐದು ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದರ ಬೆನ್ನಲ್ಲೇ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಹುಮತ ಸಾಬೀತುಪಡಿಸುವ ಮುನ್ನ ದೇವೇಂದ್ರ ಫಡ್ನವಿಸ್ ಅವರು ಸಹ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಹುಮತ ಸಾಬೀತು ಪಡಿಸಲು ಸಾಕಷ್ಟು ಸರ್ಕಸ್​ ಮಾಡಿದ ಬಿಜೆಪಿ ಕೊನೆಗೂ ಸೋಲೊಪ್ಪಿಕೊಂಡಿದ್ದು, ಮುಖ್ಯಮಂತ್ರಿಯಾಗಿ ಮೂರೇ ದಿನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ. ಫಡ್ನವಿಸ್ ರಾಜಿನಾಮೆ ನಂತರ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ಸರ್ಕಾರ ರಚಿಸಲು ಮುಂದಾಗಿದ್ದು, ರಾಜ್ಯಪಾಲರ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com