ದುಂದುವೆಚ್ಚಕ್ಕೆ ಕಡಿವಾಣ:ಐಷಾರಾಮಿ ಹೊಟೇಲ್ ಬದಲು ವಿಮಾನ ನಿಲ್ದಾಣದಲ್ಲಿಯೇ ತಂಗುವ ಪ್ರಧಾನಿ ಮೋದಿ!

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಹಲವು ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ತಿಂಗಳು ಒಂದಿಲ್ಲೊಂದು ದೇಶಕ್ಕೆ ಭೇಟಿ ಕೊಡುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಪಕ್ಷದವರಿಂದ ಅವರು ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ; ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಹಲವು ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ತಿಂಗಳು ಒಂದಿಲ್ಲೊಂದು ದೇಶಕ್ಕೆ ಭೇಟಿ ಕೊಡುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಪಕ್ಷದವರಿಂದ ಅವರು ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು.


ಆದರೆ ಹೀಗೆ ವಿದೇಶ ಪ್ರಯಾಣ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಾಧ್ಯವಾದಷ್ಟು ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುತ್ತಾರೆ. ಕಡಿಮೆ ಖರ್ಚಿನಲ್ಲಿ ತಮ್ಮ ಪ್ರವಾಸ ಮುಗಿಸಿಕೊಂಡು ಬರುತ್ತಾರಂತೆ, ಅದು ಹೇಗಂತೀರಾ ಇಲ್ಲಿದೆ ನೋಡಿ ವಿವರ:


ವಿದೇಶಗಳಿಗೆ ಪ್ರಯಾಣಿಸುವಾಗ ಮಧ್ಯೆ ತಾಂತ್ರಿಕ ಅಡಚಣೆಯುಂಟಾದರೆ ಅಥವಾ ವಿಮಾನಕ್ಕೆ ಮರುಇಂಧನ ಹಾಕಬೇಕೆಂದರೆ ಪ್ರಧಾನ ಮಂತ್ರಿ ಮತ್ತು ಅವರ ಜೊತೆ ಹೋಗುವ ನಿಯೋಗದ ಸದಸ್ಯರು ಐಷಾರಾಮಿ ಹೊಟೇಲ್ ಗಳಲ್ಲಿ ಉಳಿದುಕೊಳ್ಳುತ್ತಾರೆ.  ಆದರೆ ಮೋದಿಯವರು ಐಷಾರಾಮಿ ಫೈವ್ ಸ್ಟಾರ್ ಹೊಟೇಲ್ ಗೆ ಹೋಗುವುದಿಲ್ಲವಂತೆ. ಬದಲಿಗೆ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಅಲ್ಲಿಯೇ ಸ್ನಾನ ಮಾಡುತ್ತಾರಂತೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಖರ್ಚು ಕಡಿಮೆಯಾಗುತ್ತದೆಯಲ್ಲವೇ ಎಂಬ ಮನೋಭಾವ ಪ್ರಧಾನಿಗಳದ್ದು.


ಈ ವಿಷಯವನ್ನು ಹೇಳಿದ್ದು ಮತ್ತಿನ್ಯಾರೂ ಅಲ್ಲ, ಅವರ ನಿಕಟವರ್ತಿ, ರಾಜಕೀಯ ಸಹೋದ್ಯೋಗಿ ಅಮಿತ್ ಶಾ, ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಅವರು ದೀರ್ಘ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಪ್ರಯಾಣ ಮಧ್ಯೆ ಏನಾದರೂ ತೊಂದರೆಯಾದರೆ ಪ್ರಧಾನ ಮಂತ್ರಿ ಐಷಾರಾಮಿ ಹೊಟೇಲ್ ಗೆ ಹೋಗುವುದಿಲ್ಲ. ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿಯೇ ಉಳಿದುಕೊಳ್ಳುತ್ತಾರೆ ಎಂದಿದ್ದಾರೆ.


ಸಾರ್ವಜನಿಕ ಮತ್ತು ವೈಯಕ್ತಿಕ ಜೀವನದಲ್ಲಿ ಮೋದಿಯವರದ್ದು ತುಂಬಾ ಶಿಸ್ತುಬದ್ಧ ಜೀವನ. ವಿದೇಶಗಳಿಗೆ ಅಧಿಕೃತ ಪ್ರವಾಸಗಳಿಗೆ ಮೋದಿಯವರು ಹೋಗುವಾಗ ತಮ್ಮ ಒಟ್ಟಿಗೆ ಶೇಕಡಾ 20ಕ್ಕಿಂತ ಕಡಿಮೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಾರೆ. ಅಧಿಕೃತ ನಿಯೋಗಕ್ಕೆ ದೊಡ್ಡ ದೊಡ್ಡ ಕಾರುಗಳನ್ನು ಬಯಸುವುದಿಲ್ಲ. ಹಿಂದೆಯೆಲ್ಲಾ ಅಧಿಕಾರಿಗಳು ಪ್ರತ್ಯೇಕ ಕಾರುಗಳನ್ನು ಬಳಸುತ್ತಿದ್ದರು. ಇಂದು ಬಸ್ ಅಥವಾ ಬೇರೆ ದೊಡ್ಡ ವಾಹನಗಳನ್ನು ಬಳಸುತ್ತಾರೆ ಎಂದರು ಅಮಿತಾ ಶಾ.
ವಿಶೇಷ ರಕ್ಷಣಾ ಪಡೆ(ತಿದ್ದುಪಡಿ)ಮಸೂದೆ 2019ರ ಮೇಲಿನ ಚರ್ಚೆ ಸಂದರ್ಭದಲ್ಲಿ ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಗಾಂಧಿ ಕುಟುಂಬ ಎಸ್ ಪಿಜಿ ಭದ್ರತೆಯನ್ನು ಹಲವು ಬಾರಿ ದುರುಪಯೋಗಪಡಿಸಿದೆ ಮತ್ತು ಅದರ ನಿಯಮಗಳನ್ನು ಕೂಡ ಉಲ್ಲಂಘಿಸಿದೆ. ಆದರೆ ಕಳೆದ 20 ವರ್ಷಗಳಿಂದ ವಿಶೇಷ ಭದ್ರತೆ ಹೊಂದಿರುವ ಮೋದಿಯವರು ಒಂದು ಬಾರಿ ಕೂಡ ನಿಯಮ ಉಲ್ಲಂಘಿಸಿಲ್ಲ ಎಂದು ಹೊಗಳಿದರು.


ಕೆಲವರಿಗೆ ಭದ್ರತೆ ಪ್ರತಿಷ್ಠೆಯ ಸಂಕೇತ. ಕೆಲವರಿಗೆ ಭದ್ರತೆಯೆಂಬುದು ಒಂದು ಕ್ಷುಲ್ಲಕ ವಿಷಯವಾಗಿ ಕಾಣುತ್ತಿದ್ದು, ನಿಯಮಗಳನ್ನೆಲ್ಲಾ ಗಾಳಿಗೆ ತೂರುತ್ತಾರೆ. ಆದರೆ ಭದ್ರತೆಯ ನಿಯಮಗಳನ್ನು, ಶಿಷ್ಠಾಚಾರಗಳನ್ನು ಪಾಲಿಸುವ ವಿಚಾರದಲ್ಲಿ ನಾವು ಮೋದಿಯವರನ್ನು ಅನುಸರಿಸೋಣ ಎಂದರು.


ಪ್ರಧಾನಿ ಮೋದಿಯವರು 2017ರಲ್ಲಿ ಗುಜರಾತ್ ನಲ್ಲಿ ಸೀಪ್ಲೇನ್ ಸವಾರಿ ವೇಳೆ ಎಸ್ ಪಿಜಿ ಭದ್ರತೆ ನಿಯಮವನ್ನು ಉಲ್ಲಂಘಿಸಿದ್ದರು ಎಂದು ಕಾಂಗ್ರೆಸ್ ಸದಸ್ಯ ಗೌರವ್ ಗೊಗೊಯ್ ಹೇಳಿದಾಗ ಅಮಿತ್ ಶಾ ಅದನ್ನು ನಿರಾಕರಿಸಿದರು. ಸೀಪ್ಲೇನ್ ನ್ನು ಸಮಗ್ರವಾಗಿ ತಪಾಸಣೆ ಮಾಡಿ ಎಸ್ ಪಿಜಿ ಅನುಮೋದನೆ ಪಡೆದು ಅದರ ಸಿಬ್ಬಂದಿ ಒಳಗಿದ್ದರು. ಸೀಪ್ಲೇನ್ ಸವಾರಿ ಉದ್ದೇಶ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಾಗಿತ್ತು. ಅದು ಅವರ ವೈಯಕ್ತಿಕ ಖುಷಿಗೋಸ್ಕರ ನಡೆಸಿದ ಸವಾರಿಯಾಗಿರಲಿಲ್ಲ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com