ಅನೌಪಚಾರಿಕ ಶೃಂಗ ಸಭೆ: ಚೆನ್ನೈಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೆ ಅದ್ಧೂರಿ ಸ್ವಾಗತ

ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್....
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಚೆನ್ನೈ: ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೇಲ್ವಂ ಅವರು ಅದ್ಧೂರಿ ಸ್ವಾಗತ ನೀಡಿದರು.

ಇಂದು ಮಧ್ಯಾಹ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷರಿಗೆ ಸಾಂಪ್ರದಾಯಿಕ ನೃತ್ಯದ ಮೂಲಕ ತಮಿಳುನಾಡು ಸರ್ಕಾರ ಅಭುತಪೂರ್ವ ಸ್ವಾಗತ ಕೋರಿದೆ. ಅಲ್ಲದೆ, ಎರಡು ದಿನಗಳ ಶೃಂಗಸಭೆ ನಿಮಿತ್ತ 5 ಸಾವಿರ ಪೊಲೀಸರ ಬಿಗಿ ಪೊಲೀಸ್​ ಬಂದೋಬಸ್ತ್​​ ನೀಡಲಾಗಿದೆ.

ಕ್ಸಿ ಜಿನ್ ಪಿಂಗ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಖಾಸಗಿ ಹೋಟೆಲ್ ಗೆ ತೆರಳಿದ್ದು, 4 ಗಂಟೆಗೆ ರಸ್ತೆ ಮೂಲಕ ಮಹಾಬಲಿಪುರಂಗೆ ತೆರಳಲಿದ್ದಾರೆ. ಈಗಾಗಲೇ ಮಹಾಬಲಿಪುರಂಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ಸಿ ಜಿನ್ ಪಿಂಗ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ಭಾರತ - ಚೀನಾ ಮುಖ್ಯಸ್ಥರ ನಡುವೆ ಮತ್ತೊಂದು ಅನೌಪಚಾರಿಕ ಸಭೆ ಇಂದು ಸಂಜೆ ಮಹಾಬಲಿಪುರಂನಲ್ಲಿ ನಡೆಯುಲಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರತ ಮತ್ತು ಚೀನಾ ನಡುವಿನ ವ್ಯಾಪರ ವಹಿವಾಟನ್ನು ಸುಧಾರಿಸುವ ಹಾಗೂ ಎರಡೂ ರಾಷ್ಟ್ರಗಳ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಚೀನಾದ ವುಹಾನ್ ಎಂಬಲ್ಲಿ ಉಭಯ ನಾಯಕರು ಮೊದಲ ಬಾರಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ್ದರು. ಈ ವೇಳೆ ಅನೇಕ ಪ್ರಮುಖ ವಿಚಾರಗಳ ಕುರಿತು ಚರ್ಚೆ ಮಾಡಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್ ಮೊದಲ ಬಾರಿಗೆ ಭೇಟಿಯಾಗುತ್ತಿದ್ದು, ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಜಾಗತಿಕ ನಾಯಕರಾಗಲು ಪೈಪೋಟಿ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್'ಪಿಂಗ್ ಉಭಯ ದೇಶಗಳ ನಡುವೆ ಇರುವ ಹಲವು ವಿವಾದಗಳಿಂದ ಜಾಗತಿಕ ವೇದಿಕೆಯಲ್ಲಿ ಅಖಂಡ ವೈರಿಗಳೆಂದೇ ಪರಿಗಣಿಸಲ್ಪಡುತ್ತಾರೆ. ಆದರೆ, ಅನೌಪಚಾರಿಕ ಭೇಟಿಯ ವಿಚಾರಕ್ಕೆ ಬಂದಾಗ ಇಬ್ಬರೂ ಇನ್ನಿಲ್ಲದ ಸ್ನೇಹಿತರಂತೆ ಬಿಂಬಿಸಿಕೊಳ್ಳುತ್ತಾ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com