ನೊಬೆಲ್ ಪ್ರಶಸ್ತಿ ವಿಜೇತ, ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಪರಿಚಯ 

ಭಾರತೀಯ ಸಂಜಾತ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಸುದ್ದಿಯಲ್ಲಿದ್ದಾರೆ. 
ಅಭಿಜಿತ್ ಬ್ಯಾನರ್ಜಿ-ಎಸ್ಟೆರಾ ಡುಫ್ಲೊ
ಅಭಿಜಿತ್ ಬ್ಯಾನರ್ಜಿ-ಎಸ್ಟೆರಾ ಡುಫ್ಲೊ

ಭಾರತೀಯ ಸಂಜಾತ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಸುದ್ದಿಯಲ್ಲಿದ್ದಾರೆ. 2019ನೇ ಸಾಲಿನ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿ ಮೈಕೆಲ್ ಕ್ರೆಮೆರ್ ಜೊತೆ ಹಂಚಿಕೊಂಡಿರುವ ಈ ದಂಪತಿ ಅಮೆರಿಕಾ ಮೂಲದ ಮಸ್ಸಚುಸೆಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. 


ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ಗಂಡ-ಹೆಂಡತಿ ಒಟ್ಟಿಗೆ ಪ್ರಶಸ್ತಿ ಪಡೆದಿರುವ ಆರನೇ ಜೋಡಿ ಇವರು.  ಅಭಿಜಿತ್ ಬ್ಯಾನರ್ಜಿ ಹುಟ್ಟೂರು ಕೋಲ್ಕತ್ತಾ. ಇವರ ತಾಯಿ ನಿರ್ಮಲಾ ಬ್ಯಾನರ್ಜಿ ಕೋಲ್ಕತ್ತಾದ ಆರ್ಥಿಕ ಮತ್ತು ಸಮಾಜ ವಿಜ್ಞಾನ ಶಾಸ್ತ್ರ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿದ್ದವರು ಮತ್ತು ತಂದೆ ದೀಪಕ್ ಬ್ಯಾನರ್ಜಿ ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಕೋಲ್ಕತ್ತಾದ ಪ್ರೆಸಿಡೆನ್ಸಿ ಯೂನಿವರ್ಸಿಟಿ, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ. ನಂತರ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಗಳಿಸಿದರು. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಎರಡನೇ ಭಾರತೀಯ. 


ಅಭಿಜಿತ್ ಬ್ಯಾನರ್ಜಿ ತಮ್ಮ ಪತ್ನಿ ಡುಫ್ಲೊ ಮತ್ತು ಸೆಂದಿಲ್ ಮುಲ್ಲೈನತನ್ ಜೊತೆಗೆ 2003ರಲ್ಲಿ ಅಬ್ದುಲ್ ಲತೀಫ್ ಜಮೀಲ್ ಪವರ್ಟಿ ಆಕ್ಷನ್ ಎಂಬ ಪ್ರಯೋಗಾಲಯವನ್ನು 2003ರಲ್ಲಿ ಸ್ಥಾಪಿಸಿದ್ದರು. ಮೊದಲ ತಲೆಮಾರಿನ ಕಲಿಯುವವರಿಗೆ ಡಿ-ವಾರ್ಮಿಂಗ್ ಕಾರ್ಯಕ್ರಮಗಳು ಅಥವಾ ಶಾಲೆಯ ನಂತರದ ಸಮಯದಲ್ಲಿ ಬೋಧಿಸುವಂತಹ ಯೋಜನೆಗಳು ಬಡತನವನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅಭಿವೃದ್ಧಿ ಹೊಂದುತ್ತಿರುವ ಆಫ್ರಿಕಾ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಪ್ರಯೋಗಾತ್ಮಕ ಆರ್ಥಿಕ ಕೆಲಸಗಳ ಮೇಲೆ ಬ್ಯಾನರ್ಜಿ ಮತ್ತು ಅವರ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದರು. 


ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸುವ ಮೂಲಕ ಅಭಿಜಿತ್ ಬ್ಯಾನರ್ಜಿ ಸುದ್ದಿಯಾಗಿದ್ದರು. ಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣ ನಿರ್ಧಾರವನ್ನು ತೆಗೆದುಕೊಂಡ ಎನ್ ಡಿಎ ಸರ್ಕಾರದ ತಾರ್ಕಿಕತೆ ಏನೆಂಬುದು ಅರ್ಥವಾಗುತ್ತಿಲ್ಲ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದರು. 


ನಿನ್ನೆ ನೊಬೆಲ್ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಅಭಿಜಿತ್ ಬ್ಯಾನರ್ಜಿ ಭಾರತದ ಆರ್ಥಿಕ ಪರಿಸ್ಥಿತಿ ಅಲುಗಾಡುವ ಸ್ಥಿತಿಯಲ್ಲಿದ್ದು ಇದರಿಂದ ಹೊರಬರಲು ಸರ್ಕಾರ ನೀತಿ ನಿರೂಪಣೆಗಳನ್ನು ಜಾಗ್ರತವಾಗಿ ಜಾರಿಗೆ ತರಬೇಕು, ನೀತಿಗಳನ್ನು ರಚಿಸಬೇಕೆ ಹೊರತು ಅದನ್ನು ಜನರ ಮೇಲೆ ಹೇರಬಾರದು ಎಂದು ಹೇಳಿದ್ದಾರೆ. 


ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಡವರಿಗೆ ತಲಾ 6 ಸಾವಿರ ರೂಪಾಯಿ ಹಣ ನೀಡುವ ಘೋಷಣೆಯ ಹಿಂದಿನ ರೂವಾರಿ ಇದೇ ಅಭಿಜಿತ್ ಬ್ಯಾನರ್ಜಿ.


ಇನ್ನು ಇವರ ಪತ್ನಿ 47 ವರ್ಷದ ಡುಫ್ಲೊ ಫ್ರಾನ್ಸ್ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞೆ. ಅರ್ಥಶಾಸ್ತ್ರದಲ್ಲಿ ನೊಬೆಲ್ ಗಳಿಸಿದ ಎರಡನೇ ಮಹಿಳೆ. ಈ ಹಿಂದೆ 2009ರಲ್ಲಿ ಎಲಿನೊರ್ ಒಸ್ಟ್ರೊಮ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಂದಿತ್ತು.
ಬ್ಯಾನರ್ಜಿ ಮತ್ತು ಡುಫ್ಲೊ ಒಟ್ಟಾಗಿ Poor Economics: A Radical Rethinking of the Way to Fight Global Poverty ಪುಸ್ತಕ ಬರೆದಿದ್ದಾರೆ. ಈ ಪುಸ್ತಕಕ್ಕೆ 2011ರಲ್ಲಿ ಫೈನಾನ್ಷಿಯಲ್ ಟೈಮ್ಸ್ ಅಂಡ್ ಗೋಲ್ಡ್ ಮ್ಯಾನ್ ಸಚ್ಚ್ಸ್ ಬ್ಯುಸಿನೆಸ್ ಬುಕ್ ಆಫ್ ದ ಇಯರ್ ಪ್ರಶಸ್ತಿ ಬಂದಿದ್ದವು. 17ಕ್ಕೂ ಅಧಿಕ ಭಾಷೆಗಳಿಗೆ ಭಾಷಾಂತರಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com