ಒಂದೆಡೆ ಫ್ಲಾಗ್ ಮೀಟಿಂಗ್: ಇದರೆ ಮಧ್ಯೆ ಬಾಂಗ್ಲಾ ಸೈನಿಕರಿಂದ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ!
ಒಂದೆಡೆ ಬಾಂಗ್ಲಾ ಮತ್ತು ಭಾರತದ ನಡುವೆ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು ಇದರ ನಡುವೆ ಬಾಂಗ್ಲಾ ಸೈನಿಕರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
Published: 17th October 2019 06:19 PM | Last Updated: 17th October 2019 06:19 PM | A+A A-

ಭಾರತೀಯ ಸೇನೆ
ನವದೆಹಲಿ: ಒಂದೆಡೆ ಬಾಂಗ್ಲಾ ಮತ್ತು ಭಾರತದ ನಡುವೆ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು ಇದರ ನಡುವೆ ಬಾಂಗ್ಲಾ ಸೈನಿಕರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ(ಬಿಜಿಬಿ) ಪಡೆ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಯೋಧ ವಿಜಯ್ ಭಾನ್ ಸಿಂಗ್ ಹುತಾತ್ಮರಾಗಿದ್ದಾರೆ. ಇನ್ನು ಮತ್ತೊಬ್ಬ ಯೋಧ ರಾಜ್ವೀರ್ ಯಾದವ್ ಅವರಿಗೆ ಗಾಯವಾಗಿದೆ.
ಪದ್ಮಾ ನದಿಯ ಮಧ್ಯಭಾಗದಲ್ಲಿರುವ ಅಂತಾರಾಷ್ಟ್ರೀಯ ಜಲಗಡಿಯೊಳಗೆ ಮೀನುಗಾರಿಕೆ ಮಾಡಲು ಬಿಎಸ್ಎಫ್ ಯೋಧರು ಭಾರತೀಯ ಮೀನುಗಾರರಿಗೆ ಅನುಮತಿ ನೀಡಿತ್ತು. ಆದರೆ ಭಾರತೀಯ ಮೀನುಗಾರರನ್ನು ಅಡ್ಡಗಟ್ಟಿದ ಬಿಜಿಬಿ ಪಡೆ ವಿಚಾರಣೆ ನಡೆಸಲು ಮುಂದಾಗಿತ್ತು.
ಈ ವೇಳೆ ಬಿಎಸ್ಎಫ್ ನ 117ನೇ ಬೆಟಾಲಿಯನ್ ಗಡಿ ಠಾಣೆ ಕಮಾಂಡರ್ ಆರು ಮಂದಿ ಯೋಧರೊಂದಿಗೆ ಮೋಟಾರು ಬೋಟ್ ನಲ್ಲಿ ಸ್ಥಳಕ್ಕೆ ತೆರಳಿ ವಿವಾದವನ್ನು ಇತ್ಯರ್ಥಪಡಿಸಲು ಯತ್ನಿಸಿದ್ದರು. ಆದರೆ ಬಿಜಿಬಿ ಪಡೆಯ ದಿಢೀರ್ ಅಂತ ಗುಂಡಿನ ದಾಳಿ ನಡೆಸಿದೆ.
ಈ ಘಟನೆ ವರದಿಯಾಗುತ್ತಿದ್ದಂತೆ ಬಿಎಸ್ಎಫ್ ಮುಖ್ಯಸ್ಥ ವಿಜೆ ಜೋಹ್ರಿ ಅವರು ಬಿಜಿಬಿಯ ಮುಖ್ಯಸ್ಥ ಮೇಜರ್ ಜನರಲ್ ಶಫೀನುಲ್ ಇಸ್ಲಾಂ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಶಫೀನುಲ್ ಇಸ್ಲಾಂ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.