ಪಿಒಕೆಯ ನಾಲ್ಕು ಉಗ್ರರ ಕ್ಯಾಂಪ್ ಮೇಲೆ ದಾಳಿ, 10 ಪಾಕ್ ಸೈನಿಕರು, 10 ಉಗ್ರರು ಹತ: ಬಿಪಿನ್ ರಾವತ್

ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಯೋಧರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಇದರ ಪರಿಣಾಮವಾಗಿ ಪಾಕಿಸ್ತಾನದ ಕನಿಷ್ಠ...
ಬಿಪಿನ್ ರಾವತ್
ಬಿಪಿನ್ ರಾವತ್

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಯೋಧರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಇದರ ಪರಿಣಾಮವಾಗಿ ಪಾಕಿಸ್ತಾನದ ಕನಿಷ್ಠ 6 ರಿಂದ 10 ಯೋಧರು ಮತ್ತು 10 ಉಗ್ರರ ಹತರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾನುವಾರ ಹೇಳಿದ್ದಾರೆ.

ಇಂದು ಬೆಳಗ್ಗೆ ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದ್ದು, ಕನಿಷ್ಠ 6 ರಿಂದ 10 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ರಾವತ್ ತಿಳಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ತಂಗ್ಧರ್ ಮತ್ತು ನೌಗಾಮ್ ನಲ್ಲಿ ಉಗ್ರರ ಕ್ಯಾಂಪ್ ಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿತ್ತು. ಆ ಉಗ್ರರು ನುಸುಳುವುದಕ್ಕೆ ಸಹಾಯ ಮಾಡುವುದಕ್ಕಾಗಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಂತೆ ಭಾರತೀಯ ಸೇನೆ ಪಿಒಕೆಯ ನಾಲ್ಕು ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂರು ಉಗ್ರರ ಕ್ಯಾಂಪ್ ಗಳು ಧ್ವಂಸಗೊಂಡಿವೆ ಎಂದು ರಾವತ್ ಹೇಳಿದ್ದಾರೆ.

ಉಗ್ರರ ನೆಲೆಗಳ ಮೇಲೆ ನಡೆದ ದಾಳಿಯಲ್ಲಿ 10 ಉಗ್ರರು ಹತರಾಗಿದ್ದು, ಉಗ್ರರ ಕುರಿತು ಹೆಚ್ಚಿಮ ಮಾಹಿತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಮಧ್ಯೆ, ಪಿಒಕೆಯ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ನಾಶ ಮಾಡಿದೆ ಎಂಬ ವರದಿಯನ್ನು ಪಾಕಿಸ್ತಾನ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಭಾರತದ ಸುಳ್ಳನ್ನು ಜಗಜ್ಜಾಹೀರು ಮಾಡುವುದಕ್ಕಾಗಿ ಪಿ5(ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಹಾಗೂ ಅಮೆರಿಕ) ದೇಶಗಳ ಪ್ರತಿನಿಧಿಗಳನ್ನು ದಾಳಿ ನಡೆದಿದೆ ಎನ್ನಲಾಗುತ್ತಿರುವ ಸ್ಥಳಕ್ಕೆ ಕರೆದೊಯ್ಯುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com