ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕಿ: ಪ್ರಧಾನಿ ನರೇಂದ್ರ ಮೋದಿ ಕರೆ 

ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೆಲವು ರಾಜ್ಯಗಳಲ್ಲಿ ಉಪ ಚುನಾವಣೆಗೆ ಸೋಮವಾರ ಬೆಳಗ್ಗೆಯೇ ಮತದಾನ ಆರಂಭವಾಗಿದ್ದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಚೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಹಲವು ರಾಜ್ಯಗಳಲ್ಲಿ ಉಪ ಚುನಾವಣೆಗೆ ಸೋಮವಾರ ಬೆಳಗ್ಗೆಯೇ ಮತದಾನ ಆರಂಭವಾಗಿದ್ದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಚೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.


ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಹಲವು ಭಾಗಗಳಲ್ಲಿ ಉಪ ಚುನಾವಣೆ ಸಹ ನಡೆಯುತ್ತಿದೆ. ಈ ರಾಜ್ಯಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಪ್ರಜಾಪ್ರಭುತ್ವದ ಹಬ್ಬವನ್ನು ಉತ್ಕೃಷ್ಟಗೊಳಿಸಬೇಕು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಛತ್ರಪತಿ ಶಿವಾಜಿ ಮಹಾರಾಜರ ಕನಸಾದ ಸ್ವರಾಜ್ಯವನ್ನು ನನಸು ಮಾಡಲು ಸರ್ಕಾರ ರಚನೆಯಲ್ಲಿ ಪ್ರತಿಯೊಬ್ಬ ನಾಗರಿಕರ ಮತ ಬಹಳ ಮುಖ್ಯವಾಗುತ್ತದೆ. ಮಹಾರಾಷ್ಟ್ರ ರಾಜ್ಯದ ನನ್ನ ಸಹೋದರ, ಸಹೋದರಿಯರೇ ಸ್ಥಿರ ಮತ್ತು ಪ್ರಾಮಾಣಿಕ ಸರ್ಕಾರ ರಚನೆಗೆ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಿ ಎಂದಿದ್ದಾರೆ.

ಹರ್ಯಾಣ ವಿಧಾನಸಭೆ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ ಅವರು, ಜಾತ್ಯಾತೀತತೆ, ಕೌಟುಂಬಿಕತೆ ಮತ್ತು ಭ್ರಷ್ಟಾಚಾರ ಹರ್ಯಾಣ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಅಭಿವೃದ್ಧಿ ಮತ್ತು ರಾಷ್ಟ್ರೀಯತೆಗೆ ನಿಮ್ಮ ಒಂದೊಂದು ಮತ ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಆಗಿದ್ದು ಅದನ್ನು ಪಾಲಿಸುವಂತೆ ಕರೆ ನೀಡಿದರು. ಮತದಾನ ನಮ್ಮ ಹಕ್ಕು, ನಮ್ಮ ಕರ್ತವ್ಯ, ಅದು ಪ್ರಜಾಪ್ರಭುತ್ವದ ಆಂತರಿಕ ಭಾಗ, ಎಲ್ಲರೂ ಮತ ಹಾಕಿ ಎಂದಿದ್ದಾರೆ. ನಾಗ್ಪುರ ನೈರುತ್ಯ ಭಾಗದಿಂದ ಫಡ್ನವೀಸ್ ಮರು ಆಯ್ಕೆ ಬಯಸಿ ಕಾಂಗ್ರೆಸ್ ನ ಆಶೀಶ್ ದೇಶ್ ಮುಖ್ ವಿರುದ್ಧ ಸ್ಪರ್ಧಿಸಿದ್ದಾರೆ.
 


ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ.


ಹರ್ಯಾಣದಲ್ಲಿ 4 ಸಾವಿರದ 400 ಅಭ್ಯರ್ಥಿಗಳ ಮತ್ತು ಮಹಾರಾಷ್ಟ್ರದಲ್ಲಿ 3 ಸಾವಿರದ 237 ಅಭ್ಯರ್ಥಿಗಳ ಭವಿಷ್ಯ ಇಂದು ಮತ ಯಂತ್ರದಲ್ಲಿ ಮುದ್ರೆಯಾಗಲಿದೆ. ಹರ್ಯಾಣದಲ್ಲಿ 19 ಸಾವಿರದ 578 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮಹಾರಾಷ್ಟ್ರದಲ್ಲಿ 96 ಸಾವಿರದ 661 ಮತಗಟ್ಟೆಗಳಿವೆ. 


ಇನ್ನು ದೇಶದ 17 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದ ಸತಾರಾ ಮತ್ತು ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರಗಳಿಗೆ ಸಹ ಇಂದು ಉಪ ಚುನಾವಣೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com