ಕತುವಾ ಅತ್ಯಾಚಾರ, ಹತ್ಯೆ ಪ್ರಕರಣ: ಎಸ್ಐಟಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ

2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತೀರ್ಪು ಪ್ರಕಟಗೊಂಡ ನಾಲ್ಕು ತಿಂಗಳ ನಂತರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್ಐಟಿ)ದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಂಗಳವಾರ ಕೋರ್ಟ್ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತೀರ್ಪು ಪ್ರಕಟಗೊಂಡ ನಾಲ್ಕು ತಿಂಗಳ ನಂತರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್ಐಟಿ)ದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಂಗಳವಾರ ಕೋರ್ಟ್ ಆದೇಶಿಸಿದೆ.

ಕತುವಾ ಅತ್ಯಾಚಾರ, ಹತ್ಯೆ ಪ್ರಕರಣದ ಪ್ರಮುಖ ಅಪರಾಧಿ, ದೇಗುಲದ ಅರ್ಚಕ ಸಾಂಜಿ ರಾಮ್ ಸೇರಿದಂತೆ ಆರು ಅಪರಾಧಿಗಳಿಗೆ ಪಠಾನ್ ಕೋಟ್ ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ತನಿಖೆಯ ವೇಳೆ ಎಸ್ ಐಟಿ ಅಧಿಕಾರಿಗಳು ಸುಳ್ಳು ಹೇಳಿಕೆ ನೀಡುವಂತೆ ಸಾಕ್ಷಿಗಳಿಗೆ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಕ್ಷಿಗಳಾದ ಸಚಿನ್ ಶರ್ಮಾ, ನೀರಜ್ ಶರ್ಮಾ ಹಾಗೂ ಸಹಿಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರೇಮ್ ಸಾಗರ್ ಅವರು, ಎಸ್ಐಟಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಮ್ಮು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

ತನಿಖೆಯ ವೇಳೆ ಎಸ್ಎಸ್ ಪಿಯಾಗಿದ್ದ ಆರ್ ಕೆ ಜಲ್ಲ, ಎಎಸ್ ಪಿ ಪೀರ್ಜದ್ ನವೀದ್, ಡಿಎಸ್ ಪಿಗಳಾದ ಶೆತಂಬರಿ ಶರ್ಮಾ ಹಾಗೂ ನಿಸ್ಸಾರ್ ಹುಸ್ಸೇನ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳಾದ ಉರ್ಫಾನ್ ವನಿ, ಕೇವಲ್ ಕಿಶೋರ್ ವಿರುದ್ಧ ಎಫ್ಐಆರ್ ದಾಖಿಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.

ಪ್ರಮುಖ ಅಪರಾಧಿಗಳಾದ ಸಾಂಜಿ ರಾಮ್, ದೀಪಕ್ ಕಜುರಿಯಾ ಹಾಗೂ ಪರ್ವೇಶ್ ಕುಮಾರ್ ಗೆ ಜೀವಾವಧಿ ಸಜೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದಂತೆ ಪ್ರಕರಣದ ಸಾಕ್ಷಿ ನಾಶಗೊಳಿಸಿದ ಜಮ್ಮು ಕಾಶ್ಮೀರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆನಂದ್ ದಿತ್ತ, ಕಾನ್ಸ್ ಸ್ಟೇಬಲ್ ಸುರಿಂದರ್ ಕುಮಾರ್ ಹಾಗೂ ತಿಲಕ್ ರಾಜ್ ಗೆ ಭಾರತೀಯ ದಂಡ ಸಂಹಿತೆ 201ರ ಅನುಸಾರ 5 ವರ್ಷ ಜೈಲು ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಘಟನೆ ವೇಳೆ ಪರೀಕ್ಷೆಗಾಗಿ ಮೀರತ್ ಗೆ ತೆರಳಿದ್ದ ಸಾಂಜಿ ರಾಮ್ ಪುತ್ರ ವಿಶಾಲ್ ಜರ್ಗೋತ್ರ ಅವರನ್ನು ಖುಲಾಸೆಗೊಳಿಸಲಾಗಿದೆ.

2018ರ ಜನವರಿ 10ರಂದು ಕತುವಾ ಜಿಲ್ಲೆಯ ಹೀರಾನಗರದ ರಾಸನ ಗ್ರಾಮದ ರಾಸನ ಮೊಹರ ಎಂಬ ಬಾಲಕಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು. ಆಕೆಯ ಮೃತದೇಹ ಒಂದು ವಾರದ ನಂತರ ದೇಗುಲದ ಆವರಣದಲ್ಲಿ ಪತ್ತೆಯಾಗಿತ್ತು.

ಪ್ರಕರಣ ಸಂಬಂಧ 100 ಪ್ರತ್ಯಕ್ಷ ದರ್ಶಿಗಳು ಸಾಕ್ಷಿ ಹೇಳಿದ್ದರು. ಪ್ರಕರಣದ ಗಂಭೀರತೆ ಅರಿತು ವಿಚಾರಣೆಯನ್ನು ಜಮ್ಮು ಕಾಶ್ಮೀರ ರಾಜ್ಯದ ಹೊರಗಿನ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com