ವಿಧಿ 370 ರದ್ಧತಿ ಬಳಿಕ ಹಿಂಸಾಚಾರ ಸುದ್ದಿ; ಕಾಶ್ಮೀರಕ್ಕೆ ಯೂರೋಪಿಯನ್ ನಿಯೋಗ ಭೇಟಿ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ಅನ್ನು ರದ್ಧು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಉಂಟಾಗಿದೆ ಎಂಬ ಸುದ್ದಿಗಳ ಹರಿದಾಡುತ್ತಿರುವಂತೆಯೇ ಇತ್ತ ಯೂರೋಪಿನ ಜನಪ್ರತಿನಿಧಿಗಳ ನಿಯೋಗವೊಂದು ಕಾಶ್ಮೀರಕ್ಕೆ ಭೇಟಿ ನೀಡಿದೆ.
ಯೂರೋಪಿನ ಒಕ್ಕೂಟ
ಯೂರೋಪಿನ ಒಕ್ಕೂಟ

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ಅನ್ನು ರದ್ಧು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಉಂಟಾಗಿದೆ ಎಂಬ ಸುದ್ದಿಗಳ ಹರಿದಾಡುತ್ತಿರುವಂತೆಯೇ ಇತ್ತ ಯೂರೋಪಿನ ಜನಪ್ರತಿನಿಧಿಗಳ ನಿಯೋಗವೊಂದು ಕಾಶ್ಮೀರಕ್ಕೆ ಭೇಟಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅಧ್ಯಯನ ನಡೆಸಲು ಬಂದಿರುವ ಯೂರೋಪ್​ ಒಕ್ಕೂಟದ 27 ಮಂದಿ ಸಂಸದರ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. 

ಜಮ್ಮು ಕಾಶ್ಮೀರದ ಈಗಿನ ಸ್ಥಿತಿಗತಿ ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಈ ಪ್ರದೇಶದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಜಿತ್ ದೋವಲ್ ಅವರು ನಿಯೋಗಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 

ಔತಣಕೂಟದಲ್ಲಿ ಕಾಶ್ಮೀರ ರಾಜಕೀಯ ಮುಖಂಡರೂ ಭಾಗಿ
ಇನ್ನು ಯೂರೋಪಿಯನ್ ನಿಯೋಗಕ್ಕಾಗಿ ಡೊಭಾಲ್‌ ಏರ್ಪಡಿಸಿದ್ದ ಔತಣಕೂಟದಲ್ಲಿ ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಮುಜಪ್ಫರ್‌ ಬೇಗ್‌, ಪಿಡಿಪಿಯ ಮಾಜಿ ಮುಖಂಡ ಅಲ್ತಾಫ್‌ ಬುಖಾರಿ ಹಾಗೂ ಇತರ ಕೆಲವು ನಾಯಕರು ಪಾಲ್ಗೊಂಡಿದ್ದರು.

ಜಮ್ಮು- ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ಇಲ್ಲಿಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರತಿನಿಧಿಗಳ ಮೊದಲ ತಂಡ ಇದಾಗಿದ್ದು, ಕಣಿವೆಯ ಸ್ಥಿತಿಗತಿಯ ಬಗ್ಗೆ ಜಗತ್ತಿಗೆ ಪಾಕಿಸ್ತಾನವು ನೀಡಿರುವ ಚಿತ್ರಣವನ್ನು ಬದಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಇಟ್ಟಿರುವ ಮಹತ್ವದ ಹೆಜ್ಜೆ ಎಂದು ಹೇಳಲಾಗುತ್ತಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ ಭೇಟಿ ನೀಡುವುದರಿಂದ ಈ ತಂಡಕ್ಕೆ ಅಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ಸ್ಪಷ್ಟ ತಿಳಿವಳಿಕೆ ಲಭ್ಯವಾಗಲಿದೆ. ಆ ಭಾಗದ ಆಡಳಿತ ಮತ್ತು ಅಭಿವೃದ್ಧಿಯ ಅಗತ್ಯಗಳ ಬಗ್ಗೆಯೂ ಚಿತ್ರಣ ನೀಡಲಿದೆ ಎಂದು ಭೇಟಿಯ ಬಳಿಕ ಪ್ರಧಾನಿ ಕಚೇರಿಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com