ಭಾರತೀಯ ವಾಯುಸೇನೆ ಬತ್ತಳಿಕೆಗೆ 8 ಅಪಾಚೆ ಹೆಲಿಕಾಪ್ಟರ್ ಗಳ ಸೇರ್ಪಡೆ

ಅಮೆರಿಕ ಸೇನೆಯಲ್ಲಿ ಪ್ರಬಲ ಯುದ್ಧ ಹೆಲಿಕಾಪ್ಟರ್ ಗಳಲ್ಲಿ ಒಂದಾದ  ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಇದೀಗ ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ.
ವಾಯುಸೇನೆ ಬತ್ತಳಿಕೆ ಸೇರಿದೆ ಅಪಾಚೆ ಹೆಲಿಕಾಪ್ಟರ್
ವಾಯುಸೇನೆ ಬತ್ತಳಿಕೆ ಸೇರಿದೆ ಅಪಾಚೆ ಹೆಲಿಕಾಪ್ಟರ್

ಪಠಾಣ್ ಕೋಟ್ ವಾಯುನೆಲೆಗೆ ಆಗಮಿಸಿದ 8 ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು

ನವದೆಹಲಿ: ಅಮೆರಿಕ ಸೇನೆಯಲ್ಲಿ ಪ್ರಬಲ ಯುದ್ಧ ಹೆಲಿಕಾಪ್ಟರ್ ಗಳಲ್ಲಿ ಒಂದಾದ  ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಇದೀಗ ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ.

ಮೂಲಗಳ ಪ್ರಕಾರ ಒಟ್ಟು 8 ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಇಂದು ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಪಠಾಣ್ ಕೋಟ್ ವಾಯುನೆಲೆಯಲ್ಲಿ ಅಪಾಚೆ ಹೆಲಿಕಾಪ್ಟರ್ ಗಳನ್ನು ವಾಯುಸೇನೆ ಕಾರ್ಯಾಚರಣೆಗೆ ನಿಯುಕ್ತಗೊಳಿಸಲಾಗಿದೆ. ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಯ ಸೇವೆಗೆ ನಿಯುಕ್ತವಾಗಿದೆ.

ಇಂದು ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರಿಗೆ ಬೋಯಿಂಗ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ ಅವರು 8 ಅಪಾಚೆ ಯುದ್ದ ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು, ವಿಶ್ವದ ಪ್ರಬಲ ಯುದ್ಧ ಹೆಲಿಕಾಪ್ಚರ್ ಗಳಲ್ಲಿ ಅಪಾಚೆ ಕೂಡ ಒಂದಾಗಿದೆ. ಏಕಕಾಲದಲ್ಲಿ ಹಲವು ಬಗೆಯ ಯೋಜನೆಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಈ ಅಪಾಚೆ ಹೆಲಿಕಾಪ್ಟರ್ ಗಳು ಹೊಂದಿವೆ. ಎಹೆಚ್ 64E ಯನ್ನು ಸೇನೆಯ ಬತ್ತಳಿಕಿಗೆ ಸೇರಿಸಿಕೊಳ್ಳುವ ಮೂಲಕ ವಾಯುಸೇನೆಯ ಸಾಮರ್ಥ್ಯ ವೃದ್ದಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಅಪಾಚೆ ಹೆಲಿಕಾಪ್ಟರ್ ನಿರ್ಮಾಣ ಮಾಡಿದ ಬೋಯಿಂಗ್ ಇಂಡಿಯಾ ಮುಖ್ಯಸ್ಥ ಸಲೀಲ್ ಗುಪ್ತೆ ಅವರು, 22 ಅಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದ ಅನ್ವಯ ಇದೀಗ 8 ಹೆಲಿಕಾಪ್ಟರ್ ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಗಿದೆ. ಪ್ರಸ್ತುತ 8 ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸಲಾಗಿದ್ದು, ಬಾಕಿ ಉಳಿದಿರುವ ಹೆಲಿಕಾಪ್ಟರ್ ಗಳನ್ನು ಪೂರ್ನ ನಿಯೋಜಿಕ ದಿನಾಂಕದಂತೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಸ್ತುತ ಭಾರತಕ್ಕೆ ಹಸ್ತಾಂತರಿಸಿರುವ ಹೆಲಿಕಾಪ್ಟರ್ ಗಳು ಅಮೆರಿಕ ಸೇನೆಯಲ್ಲಿರುವ ಹೆಲಿಕಾಪ್ಟರ್ ಗಳ ಮಾದರಿಯ ತಂತ್ರಜ್ಞಾನವನ್ನೇ ಹೊಂದಿದೆ ಎಂದು ಅವರು ಹೇಳಿದ್ದಾರೆ. 

ಹೆಲಿಕಾಪ್ಟರ್ ವಿಶೇಷತೆಗಳೇನು?
ಅಪಾಚೆ ಹೆಲಿಕಾಪ್ಟರ್ ಗಳನ್ನು ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡುತ್ತಿದ್ದು, ಭಾರತೀಯ ವಾಯುಪಡೆಯ ಅಗತ್ಯಕ್ಕೆ ತಕ್ಕಂತೆ ಈ ಹೆಲಿಕಾಪ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೆಲಿಕಾಪ್ಟರ್ ಗಳು ರಾಕೆಟ್‌ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದ್ದು, ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಬಿರುಗಾಳಿ ಹಾಗೂ ಭಾರೀ ಮಳೆ ಸೇರಿದಂತೆ ಯಾವುದೇ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅಡೆತಡೆಯಿಲ್ಲದೆ ಕಾರ್ಯಾಚರಣೆ ನಡೆಸಲಿದೆ. 

ಇನ್ನು ಪರ್ವತದ ಪ್ರದೇಶಗಳಲ್ಲಿ, ಮಂಜಿನ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಅಪಾಚೆ ಹೆಲಿಕಾಪ್ಟರ್ ಗಳು ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲಿನ ಕಡಿದಾದ ಪ್ರದೇಶದಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲ್ಬಾಗದಿಂದ ಎದುರಾಗುವ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಭೂ ಸೇನೆಗೆ ಪೂರಕವಾಗಿ ಕಾರ್ಯಾಚರಣೆಗೆ ಇವು ನೆರವಾಗಲಿವೆ. ಅಂತೆಯೇ ಯುದ್ದ ಭೂಮಿಯಿಂದ ನೇರ ನಿಯಂತ್ರಣ ಕೊಠಡಿಗಳಿಗೆ ಛಾಯಾಚಿತ್ರ ತೆಗೆದು ರವಾನೆ, ವಿನಿಮಯ ಮಾಡುವ ಸಾಮರ್ಥ್ಯ ಈ ಕಾಪ್ಟರ್ ಗಳಿಗಿದೆ. ಅಲ್ಲದೆ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಈ ಬಹುಪಯೋಗಿ ಕಾಪ್ಟರ್ ಗಳನ್ನು ಬಳಕೆ ಮಾಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com