ಇಸ್ರೊ ಅಧ್ಯಕ್ಷ ಕೆ ಶಿವನ್
ಇಸ್ರೊ ಅಧ್ಯಕ್ಷ ಕೆ ಶಿವನ್

ಚಂದ್ರಯಾನ-2, 'ಆರ್ಬಿಟರ್' ಜೀವಿತಾವಧಿ 7 ವರ್ಷಗಳು; ಹೇಗೆ, ಇಲ್ಲಿದೆ ಮಾಹಿತಿ  

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾದ ನಂತರ ಇಸ್ರೊ ಸಂಸ್ಥೆಯ ಮುಂದಿನ ಯೋಜನೆಯೇನು ಎಂಬ ಬಗ್ಗೆ ಸಂಸ್ಥೆ ಅಧ್ಯಕ್ಷ ಕೆ ಶಿವನ್ ಮಾತನಾಡಿದ್ದಾರೆ. 

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾದ ನಂತರ ಇಸ್ರೊ ಸಂಸ್ಥೆಯ ಮುಂದಿನ ಯೋಜನೆಯೇನು ಎಂಬ ಬಗ್ಗೆ ಸಂಸ್ಥೆ ಅಧ್ಯಕ್ಷ ಕೆ ಶಿವನ್ ಮಾತನಾಡಿದ್ದಾರೆ.


ಕೊನೆ ಕ್ಷಣದಲ್ಲಿ ಆದ ತಪ್ಪೇನು?: ಚಂದ್ರಯಾನ-2ನ ನಾಲ್ಕು ಮೂಲ ಹಂತಗಳಲ್ಲಿ ಮೊದಲ ಮೂರು ಹಂತಗಳು ಯಶಸ್ವಿಯಾಗಿದ್ದವು. ಕೊನೆ ಹಂತದಲ್ಲಿ ಸಂಪರ್ಕ ಕಳೆದುಕೊಂಡು ಸಂವಹನವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಲ್ಯಾಂಡರ್ ಮತ್ತು ಆರ್ಬಿಟರ್ ಮಧ್ಯೆ ಸಂವಹನ ಕೊಂಡಿ ಇರಬೇಕಾಗುತ್ತದೆ. ಮುಂದಿನ 14 ದಿನಗಳ ಕಾಲ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ ಶಿವನ್.


ಲ್ಯಾಂಡರ್ ನ ಮೂಲ ಪತ್ತೆ ಹಚ್ಚಿದ್ದು ಹೇಗೆ? ಆರ್ಬಿಟರ್ ಸೆರೆಹಿಡಿದಿರುವ ಲ್ಯಾಂಡರ್ ನ ಥರ್ಮಲ್ ಇಮೇಜ್ ನಿಂದಾಗಿ ಲ್ಯಾಂಡರ್ ನ ಮೂಲ ಪತ್ತೆ ಹಚ್ಚಲಾಗಿದೆ. ಆದರೆ ಅಲ್ಲಿಂದ ಯಾವುದೇ ಸಂವಹನ ಹೊರಬರುತ್ತಿಲ್ಲ. ಅದಕ್ಕಾಗಿ ಇಸ್ರೊ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ.


ಚಂದ್ರಯಾನ-2 ಯೋಜನೆ ಎಷ್ಟು ಯಶಸ್ವಿಯಾಗಿದೆ?: ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಸಾರುವುದು ಚಂದ್ರಯಾನ-2ನ ಪ್ರಮುಖ ಉದ್ದೇಶ. ಇದನ್ನು ಹೊರತುಪಡಿಸಿ, ಚಂದ್ರನ ಸುತ್ತ ನಿರ್ದಿಷ್ಟ ಕಕ್ಷೆಯಲ್ಲಿ ಇರಿಸುವುದು ಮುಖ್ಯವಾಗಿತ್ತು. ಇದರಿಂದ ವಿಜ್ಞಾನಿಗಳಿಗೆ ಚಂದ್ರನ ವಿಕಸನ ಮತ್ತು ಧ್ರುವ ಪ್ರದೇಶಗಳಲ್ಲಿ ಖನಿಜ ಮತ್ತು ನೀರಿನ ಅಣುಗಳು ಇರುವ ಬಗ್ಗೆ ಅಧ್ಯಯನ ಮಾಡಲು ಸಹಾಯವಾಗುತ್ತದೆ. ಆರ್ಬಿಟರ್ ಕ್ಯಾಮರಾದಲ್ಲಿ ಹೆಚ್ಚಿನ ರೆಸೊಲ್ಯೂಷನ್ ಇರುವ ಚಿತ್ರಗಳು ಸಿಗುತ್ತದೆ. ಚಂದ್ರನ ಇಡೀ ಜಗತ್ತನ್ನು ಈ ಕ್ಯಾಮರಾ ಆವರಿಸುತ್ತದೆ. 


ಇದೀಗ ಎಂಜಿನ್ ನಲ್ಲಿ ಹೆಚ್ಚುವರಿ ಇಂಧನ ಸಿಕ್ಕಿರುವುದರಿಂದ ಇಸ್ರೊ ಮಾಡಿರುವ ಇತ್ತೀಚಿನ ಅಂದಾಜಿನ ಪ್ರಕಾರ ಆರ್ಬಿಟರ್ ನ ಜೀವಿತಾವಧಿ ಸುಮಾರು 7 ವರ್ಷಗಳು. ಆರಂಭದಲ್ಲಿ ಒಂದು ವರ್ಷ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಚಂದ್ರಯಾನ 2 ಯೋಜನೆಯ ವಿಜ್ಞಾನ ಕೆಲಸ ಸಂಪೂರ್ಣವಾಗಿದೆ. 


ಇನ್ನು ತಾಂತ್ರಿಕತೆಯ ವಿಷಯಕ್ಕೆ ಬರುವುದಾದರೆ,  ಚಂದ್ರಯಾನ-2 ಯೋಜನೆಯಲ್ಲಿ ಬರುವ ಮುಖ್ಯ ಭಾಗಗಳು ಲ್ಯಾಂಡರ್ ವಿಕ್ರಮ್ ಮತ್ತು ಪ್ರಜ್ಞ್ಯಾನ ರೋವರ್. ರೋವರ್ ಇರುವುದು ವಿಕ್ರಮ್ ಒಳಗೆ.ಚಂದ್ರನ ಮೇಲ್ಮೈಯಿಂದ 2 ಕಿಲೋ ಮೀಟರ್ ದೂರದಲ್ಲಿ 35 ಕಿಲೋ ಮೀಟರ್ ಕಕ್ಷೆಯಲ್ಲಿ ಟ್ರ್ಯಾಜೆಕ್ಟರಿ ಪಥವನ್ನು ವಿಕ್ರಮ್ ಅನುಸರಿಸುತ್ತಿತ್ತು.


ಯೋಜನೆಯ ಪ್ರತಿ ಹಂತದವರೆಗೆ ಯಶಸ್ಸಿನ ಮಾನದಂಡವನ್ನು ವ್ಯಾಖ್ಯಾನಿಸಲಾಗಿದ್ದು, ಇಲ್ಲಿಯವರೆಗೆ ಯೋಜನೆಯ ಉದ್ದೇಶದ ಶೇಕಡಾ 90ರಿಂದ 95ರಷ್ಟು ಸಾಧಿಸಲಾಗಿದೆ. ಇಸ್ರೊದ ಈ ಕಾರ್ಯದಿಂದ ಚಂದ್ರ ವಿಜ್ಞಾನದ ಬಗ್ಗೆ ಅಧ್ಯಯನ ಮಾಡಲು ಸಹಾಯವಾಗಲಿದೆ. ಲ್ಯಾಂಡರ್ ಜೊತೆ ಸಂವಹನ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದೇ ಯೋಜನೆಯ ವೈಫಲ್ಯ.


ಯೋಜನೆಯ ನಂತರ ವಿಜ್ಞಾನಿಗಳ ಮನಸ್ಥಿತಿ: ಇಷ್ಟು ವರ್ಷಗಳಿಂದ ಶ್ರಮಪಟ್ಟು ಮಾಡಿದ ಕೆಲಸ ಮಹಾತ್ವಾಕಾಂಕ್ಷೆಯ ಯೋಜನೆ ವೈಫಲ್ಯವಾಯಿತು ಎಂದಾಗ ಆರಂಭದಲ್ಲಿ ವಿಜ್ಞಾನಿಗಳು ಭಾವನಾತ್ಮಕವಾಗಿ ಕುಗ್ಗಿಹೋಗಿದ್ದರಂತೆ. ಆದರೆ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ ಸ್ಪೂರ್ತಿ ಮತ್ತು ಶಕ್ತಿ ನೀಡಿತು, ನಮಗೆಲ್ಲ ಪ್ರೋತ್ಸಾಹ ಸಿಕ್ಕಿದಂತಾಯಿತು ಎನ್ನುತ್ತಾರೆ ಶಿವನ್.


ಚಂದ್ರಯಾನ-2ನಿಂದಾಗಿ ಮುಂದಿನ ಯೋಜನೆಗಳ ಮೇಲೆ ಏನು ಪರಿಣಾಮ: ಇಸ್ರೊ ಸಂಸ್ಥೆಯ ಮುಂದಿನ ಯೋಜನೆಗಳು ನಿಗದಿಪಡಿಸಿದಂತೆ ಸಾಗಲಿದೆ. ಅಕ್ಟೋಬರ್ ಕೊನೆ ವೇಳೆಗೆ ಕಾರ್ಟೊಸ್ಯಾಟ್ -3 ಉಡಾವಣೆಯಿದೆ. ನಂತರ ಒಂದು ವಾರದೊಳಗೆ ರಿಸಾಟ್-2ಬಿಆರ್ 1 ಉಡಾವಣೆಗೊಳ್ಳಲಿದೆ. ಗಂಗಾಯಾನ ಫ್ಲಾಗ್ ಶಿಪ್ ಯೋಜನೆಗೆ ಇಸ್ರೊ ಕಾರ್ಯದಲ್ಲಿ ತೊಡಗಿದೆ. 2020ರ ಅಂತ್ಯದ ವೇಳೆಗೆ ಮೊದಲ ಮಾನವರಹಿತ ವಿಮಾನ ಉಡಾವಣೆಯಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com