ಇಬ್ಬರು ಮಾಜಿ ಸಿಎಂ ಸೇರಿ ಕಾಶ್ಮೀರದಲ್ಲಿ ಆಗಸ್ಟ್ 5ರಿಂದ ಇದುವರೆಗೆ 4 ಸಾವಿರ ಜನರ ಬಂಧನ: ವರದಿ

ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಸುಮಾರು 4 ಸಾವಿರ ಜನರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಸುಮಾರು 4 ಸಾವಿರ ಜನರನ್ನು ಬಂಧಿಸಲಾಗಿದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳು, 200 ರಾಜಕಾರಣಿಗಳು ಹಾಗೂ 3,800ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ರಾಯಟರ್ಸ್ ವರದಿ ಮಾಡಿದೆ. ಸುಮಾರು 2,600 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೆಪ್ಟೆಂಬರ್ 6ರಂದು ಸರ್ಕಾರವೇ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಹಾ ಹಾಗೂ ಮೆಹಬೂಬಾ ಮುಫ್ತಿ ಮತ್ತು ಅವರೊಂದಿಗೆ 100ಕ್ಕೂ ಹೆಚ್ಚು ನಾಯಕರು ಮತ್ತು ಪ್ರತ್ಯೇಕವಾದಿ ಪರ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಯಾವ ಆಧಾರದ ಮೇಲೆ ಸುಮಾರು 4000 ಜನರನ್ನು ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಕೆಲವು ಸರ್ಕಾರಿ ಅಧಿಕಾರಿಗಳ ಪ್ರಕಾರ, ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕಾಯ್ದೆ ಅಡಿ ಯಾವುದೇ ಆರೋಪ ಇಲ್ಲದಿದ್ದರೂ ಎರಡು ವರ್ಷಗಳ ಕಾಲ ಬಂಧಿಸಲು ಅವಕಾಶ ಇದೆ.

ಬಂಧಿತರ ಪೈಕಿ ಸುಮಾರು 3 ಸಾವಿರ ಜನರನ್ನು ಕಲ್ಲು ತೂರಾಟಗಾರರ ಮತ್ತು ಇತರೆ ದುಷ್ಕರ್ಮಿಗಳ ಪಟ್ಟಿಗೆ ಸೇರಿಸಲಾಗಿದೆ.

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಎಲ್ಲಾ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿರುವುದು ಮತ್ತು ರಾಜಕೀಯ ನಾಯಕರ ಬಂಧನ ಅತ್ಯಂತ ಕೆಟ್ಟ ನಿರ್ಧಾರ ಎಂದು ಮಾನವ ಹಕ್ಕುಗಳ ಸಂಸ್ಥೆ 'ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಭಾರತದ ಮುಖ್ಯಸ್ಥ ಆಕಾರ್ ಪಟೇಲ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com