ಎಂಜಿನಿಯರ್ ಗಳ ಅಪಾರ ಪರಿಶ್ರಮವಿಲ್ಲದಿದ್ದರೆ ಮಾನವನ ಪ್ರಗತಿ ಅಪೂರ್ಣ: ಪ್ರಧಾನಿ ಮೋದಿ 

ಭಾರತ, ಶ್ರೀಲಂಕಾ ಮತ್ತು ಟಾಂಜಾನಿಯಾಗಳಲ್ಲಿ ಸೆಪ್ಟೆಂಬರ್ 15ನ್ನು ಎಂಜಿನಿಯರ್ ದಿನವೆಂದು ಆಚರಿಸಲಾಗುತ್ತಿದೆ. 
ಸಾಂದರ್ಭಿಕ ಚಿತ್ರ, ಒಳಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ
ಸಾಂದರ್ಭಿಕ ಚಿತ್ರ, ಒಳಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರಿಂದ ವಿಶ್ವೇಶ್ವರಯ್ಯ ಸ್ಮರಣೆ 

ನವದೆಹಲಿ: ಭಾರತ, ಶ್ರೀಲಂಕಾ ಮತ್ತು ಟಾಂಜಾನಿಯಾಗಳಲ್ಲಿ ಸೆಪ್ಟೆಂಬರ್ 15ನ್ನು ಎಂಜಿನಿಯರ್ ದಿನವೆಂದು ಆಚರಿಸಲಾಗುತ್ತಿದೆ. ನಮ್ಮ ಕನ್ನಡಿಗರೇ ಆದ ಚಿಕ್ಕಬಳ್ಳಾಪುರದ ಭಾರತರತ್ನ, ಎಂಜಿನಿಯರಿಂಗ್ ತಜ್ಞ ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರ ಜನ್ಮದಿನವಿಂದು.


ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬ ಚಿಕ್ಕ ಊರಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು 1861ರಲ್ಲಿ ಹುಟ್ಟಿದ್ದರು. ದೂರದೃಷ್ಟಿಯಿದ್ದ ಉತ್ತಮ ಸಿವಿಲ್ ಎಂಜಿನಿಯರ್ ಮತ್ತು ಆಡಳಿತಗಾರ ವಿಶ್ವೇಶ್ವರಯ್ಯನವರ ನೆನಪಿಗೋಸ್ಕರ ಎಂಜಿನಿಯರ್ ದಿನವೆಂದು ನಾವಿಂದು ಆಚರಿಸುತ್ತೇವೆ. 

ಈ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಎಂಜಿನಿಯರ್ ದಿನದ ಶುಭಾಶಯ ತಿಳಿಸಿದ್ದಾರೆ. ವಿಶ್ವೇಶ್ವರಯ್ಯನವರು ಅತ್ಯಂತ ಶ್ರೇಷ್ಟ ಸಿವಿಲ್ ಎಂಜಿನಿಯರ್ ಆಗದ್ದರು. ಅವರು ಅಣೆಕಟ್ಟುಗಳ ಮೂಲಕ ಭಾರತದ ಜಲ ಸಂಪನ್ಮೂಲವನ್ನು ಬಳಸಿಕೊಂಡರು. ದೂರದೃಷ್ಟಿ ಹೊಂದಿದ್ದರು. ಅವರ ಅಮೂಲ್ಯ ಕೊಡುಗೆಗೆ ರಾಷ್ಟ್ರವು ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸಮಸ್ತ ಎಂಜಿನಿಯರ್ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ. ಎಂಜಿನಿಯರ್ ಗಳು ಶ್ರದ್ಧೆ ಮತ್ತು ದೃಢ ಪರಿಶ್ರಮಕ್ಕೆ ಹೆಸರಾದವರು. ಎಂಜಿನಿಯರ್ ಗಳ ಹೊಸ ಹೊಸ ಯೋಚನೆ, ಉತ್ಸಾಹವಿಲ್ಲದೆ ಮಾನವನ ಪ್ರಗತಿ ಅಪೂರ್ಣ ಎಂದು ಹೇಳಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯನವರಿಗೆ ಭಾರತ ಸರ್ಕಾರ 1955ರಲ್ಲಿ ಭಾರತರತ್ನ ನೀಡಿ ಗೌರವಿಸಿತು. ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ನಿರ್ಮಾತೃ ವಿಶ್ವೇಶ್ವರಯ್ಯನವರು. ಹೈದರಾಬಾದ್ ನಗರಕ್ಕೆ ಪ್ರವಾಹ ತಡೆ ವ್ಯವಸ್ಥೆಯನ್ನು ತಂದವರು. ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಬಂದಿದ್ದವು.
 
ದೇಶದೆಲ್ಲೆಡೆಯಿಂದ ಎಂಜಿನಿಯರ್ ದಿನದ ಅಂಗವಾಗಿ ಸರ್ ಎಂ ವಿಶ್ವೇಶ್ವರಯ್ಯನವರನ್ನು ಸ್ಮರಿಸಲಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಸರ್ ಎಂ ವಿಶ್ವೇಶ್ವರಯ್ಯನವರನ್ನು ಸ್ಮರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉದ್ಯಮಿ ಮಹೀಂದ್ರ ಗ್ರೂಪ್ ನ ಆನಂದ್ ಮಹೀಂದ್ರ ಮೊದಲಾದವರು ಸ್ಮರಿಸಿಕೊಂಡಿದ್ದಾರೆ.

1909ರ ಹೊತ್ತಿಗೆ ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದ ಮುಖ್ಯ ಎಂಜಿನಿಯರಿಂಗ್ ಆಗಿ ನೇಮಕಗೊಂಡರು. 1912ರಲ್ಲಿ ಮೈಸೂರಿನ ದಿವಾನರಾದರು. 7 ವರ್ಷಗಳ ಕಾಲ ದಿವಾನರಾಗಿ ಸೇವೆ ಸಲ್ಲಿಸಿದ್ದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣಕರ್ತರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com