ಹಿಂದಿ ಹೇರಿಕೆ ಇಲ್ಲ, ದ್ವಿತೀಯ ಭಾಷೆಯಾಗಿ ಬಳಸುವಂತೆ ಸಲಹೆ ನೀಡಿದ್ದೆ: ಅಮಿತ್ ಶಾ ಯೂ ಟರ್ನ್

ಇತ್ತೀಚಿಗಷ್ಟೇ ಒಂದು ದೇಶ, ಒಂದು ಭಾಷೆ ಎಂಬ ಪರಿಕಲ್ಪನೆ ಹರಿಬಿಟ್ಟಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇದೀಗ ಯೂಟರ್ನ್ ಹೊಡೆದಿದ್ದು, ದೇಶದಲ್ಲಿ ಹಿಂದಿ ಹೇರಿಕೆ ಮಾಡುವಂತೆ ನಾನು ಹೇಳಿಲ್ಲ.
ಅಮಿತ್ ಶಾ
ಅಮಿತ್ ಶಾ

ರಾಂಚಿ: ಇತ್ತೀಚಿಗಷ್ಟೇ ಒಂದು ದೇಶ, ಒಂದು ಭಾಷೆ ಎಂಬ ಪರಿಕಲ್ಪನೆ ಹರಿಬಿಟ್ಟಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇದೀಗ ಯೂಟರ್ನ್ ಹೊಡೆದಿದ್ದು, ದೇಶದಲ್ಲಿ ಹಿಂದಿ ಹೇರಿಕೆ ಮಾಡುವಂತೆ ನಾನು ಹೇಳಿಲ್ಲ. ಆದರೆ ದ್ವಿತೀಯ ಭಾಷೆಯಾಗಿ ಹಿಂದಿಯನ್ನು ಬಳಸುವಂತೆ ಸಲಹೆ ನೀಡಿದ್ದೆ ಎಂದು ಬುಧವಾರ ಹೇಳಿದ್ದಾರೆ.

ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಸ್ವತಃ ನಾನು ಸಹ ಹಿಂದಯೇತರ ರಾಜ್ಯದಿಂದ ಬಂದಿದ್ದು, ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿ ಹಿಂದಿ ಹೇರಿಕೆ ಮಾಡುವ ಯಾವುದೇ ಉದ್ದೇಶ ತಮ್ಮ ಹೇಳಿಕೆಯ ಹಿಂದೆ ಇರಲಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಮಾತೃಭಾಷೆಯ ಬಳಿಕ ಎರಡನೇ ಭಾಷೆಯಾಗಿ ಹಿಂದಿ ಕಲಿಯಬೇಕು ಎಂಬುವುದಷ್ಟೇ ನನ್ನ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಶನಿವಾರ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ಒಂದು ದೇಶ, ಒಂದು ಭಾಷೆ' ಎಂಬ ಧ್ವನಿ ಎತ್ತಿದ್ದರು. ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಸದ್ಯಕ್ಕೀಗ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಏಕತೆಗೊಳಿಸುವ ಶಕ್ತಿ ಹಿಂದಿ ಭಾಷೆಗೆ ಮಾತ್ರ ಇದೆ ಎಂದು ಟ್ವೀಟ್​ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೇ ವೇಳೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(ಎನ್‌ಆರ್‌ಸಿ)ಯನ್ನು ಜಾರಿಗೆ ತರಲಾಗುವುದಾಗಿ ಹೇಳಿದ ಕೇಂದ್ರ ಗೃಹ ಸಚಿವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್‌ಆರ್‌ಸಿಯನ್ನು ಜಾರಿ ತರುವುದಾಗಿ ತಮ್ಮ ಪಕ್ಷ ಜನರಿಗೆ ಭರವಸೆ ನೀಡಿತ್ತು ಎಂದರು.

ಇಡೀ ದೇಶದಲ್ಲಿ ಎನ್‌ಆರ್‌ಸಿ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಪಕ್ಷವು ಜನರಿಗೆ ಭರವಸೆ ನೀಡಿದೆ. ಎನ್‌ಆರ್‌ಸಿ ಎಂದರೆ ನಾಗರಿಕರ ರಾಷ್ಟ್ರೀಯ ನೋಂದಣಿ. ಅಸ್ಸಾಂನ ರಾಷ್ಟ್ರೀಯ ನೋಂದಣಿ ಎಂದರ್ಥವಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com