ನಾನು ಕಾಂಗ್ರೆಸ್ ನಂತೆ ಪ್ರಬಲ ಮತ್ತು ಧೈರ್ಯಶಾಲಿ: ಸೋನಿಯಾ, ಮನಮೋಹನ್ ಭೇಟಿ ಬಳಿಕ ಚಿದಂಬರಂ ಟ್ವೀಟ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ತಿಹಾರ್ ಜೈಲಿಗೆ ಭೇಟಿ ನೀಡಿ, ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ...
ಚಿದಂಬರಂ
ಚಿದಂಬರಂ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ತಿಹಾರ್ ಜೈಲಿಗೆ ಭೇಟಿ ನೀಡಿ, ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರೊಂದಿಗೆ ಮಾತುಕತೆ ನಡೆಸಿದರು.

ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಆಗಮಿಸಿದ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆಶಿ ಅವರನ್ನು ಭೇಟಿಯಾಗಲು ಕೈ ಅಧಿನಾಯಕಿಗೆ ಅವಕಾಶ ಸಿಗಲಿಲ್ಲ.

ಈ ಇಬ್ಬರು ನಾಯಕರು, ಚಿದಂಬರಂ ಅವರಿಗೆ ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿ ನೈತಿಕ ಸ್ಥೈರ್ಯ ತುಂಬಿದರು ಎನ್ನಲಾಗಿದೆ.

ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ತಮ್ಮನ್ನು ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಚಿದಂಬರಂ ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳು ಪ್ರಕಟಗೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೆ ಪ್ರಬಲ ಮತ್ತು ಧೈರ್ಯವಾಗಿರುವುದೋ ಅಲ್ಲಿಯವರೆಗೆ ನಾನೂ ಪ್ರಬಲವಾಗಿ ಮತ್ತು ಧೈರ್ಯಶಾಲಿಯಾಗಿರುತ್ತೇನೆ ಎಂದಿದ್ದಾರೆ.

ನನ್ನನ್ನು ಭೇಟಿ ಮಾಡಿದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಚಿದಂಬರಂ ಅವರನ್ನು ಆಗಸ್ಟ್ 21 ರಂದು ಸಿಬಿಐ ಬಂಧಿಸಿತ್ತು. ಅವರ ಪುತ್ರ ಕಾರ್ತಿ ಚಿದಂಬರಂ ಕೂಡ ಇಂದು ತಂದೆಯನ್ನು ಭೇಟಿಯಾಗಿದ್ದರು.

ಐಎನ್ಎಕ್ಸ್ ಮೀಡಿಯಾ ಹಗರಣ ಸಂಬಂಧ ಇಡಿ ಹಾಗೂ ಸಿಬಿಐ ಎರಡೂ ತನಿಖಾ ಸಂಸ್ಥೆಗಳು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿವೆ. ಐಎನ್ ಎಕ್ಸ್ ಮೀಡಿಯಾ ಹಗರಣದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದರೆ, ಇದೇ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. 

2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ವಿದೇಶ ನೇರ ಬಂಡವಾಳ ಸ್ವೀಕಾರಕ್ಕೆ ಹಣಕಾಸು ಸಚಿವಾಲಯ ಅನುಮತಿ ನೀಡಿತ್ತು. ಈ ಅನುಮತಿ ನೀಡಿದ 10 ವರ್ಷಗಳ ಬಳಿಕ ಅಂದರೆ 2017ರಲ್ಲಿ ಸಿಬಿಐ ಹಾಗೂ ಇಡಿ ಎರಡೂ ತನಿಖಾ ಸಂಸ್ಥೆಗಳು ಚಿದು ವಿರುದ್ಧ ಪ್ರಕರಣ ದಾಖಲಿಸಿದ್ದವು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com