ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಜಾ, ಟ್ರಬಲ್ ಶೂಟರ್ ಗೆ ತಿಹಾರ್ ಜೈಲೇ ಗತಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಲು ದೆಹಲಿ ವಿಶೇಷ ಕೋರ್ಟ್ ಬುಧವಾರ ನಿರಾಕರಿಸಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಲು ದೆಹಲಿ ವಿಶೇಷ ಕೋರ್ಟ್ ಬುಧವಾರ ನಿರಾಕರಿಸಿದೆ.

ಡಿಕೆ ಶಿವಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯ, ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್‌ ಜೈಲಿನಲಿರುವ ಶಿವಕುಮಾರ್‌ ಗೆ ಜಾಮೀನು ನಿರಾಕರಿಸಲಾಗಿದೆ ಎಂದು ಒಂದೇ ವಾಕ್ಯದ ಆದೇಶ ಓದಿ ಪೀಠದಿಂದ ತೆರಳಿದರು.

ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಕಾನೂನು ಸಮರ ಮುಂದುವರೆಸಲಿದ್ದು, ದೆಹಲಿ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಅವರು ತಿಹಾರ್‌ ಜೈಲಿನಲ್ಲೇ ಇರಬೇಕಾಗಿದೆ. 

ಜಾರಿ ನಿರ್ದೇಶನಾಲಯ(ಇಡಿ)ದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್ ಅವರು​, ಆದಾಯ ತೆರಿಗೆ ಕಾಯ್ದೆ ಅಕ್ರಮ ಹಣವನ್ನು ಸಕ್ರಮ ಮಾಡಲು ಇರುವುದಲ್ಲ. ಆದರೆ, ಡಿಕೆಶಿ ಮಾಡಿರುವುದು ಅನೈತಿಕ ಕೃತ್ಯ. ಅಕ್ರಮ ಹಣವನ್ನು ಸಕ್ರಮ ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ. ಆಸ್ತಿಗೆ ತೆರಿಗೆ ಕಟ್ಟಿ ತನ್ನ ಹಣವೆಲ್ಲ ಸಕ್ರಮ ಸಂಪಾದನೆಯಿಂದ ಗಳಿಸಿದ್ದು ಎಂದು ಪ್ರತಿಪಾದಿಸುತ್ತಿದ್ದಾರೆ. ವೈಟ್ ಮನಿ ಯಾವಾಗಲೂ ವೈಟ್ ಆಗಿರುತ್ತದೆ. ಕಪ್ಪು ಹಣ ಕಪ್ಪು ಹಣವೇ ಆಗಿರುತ್ತದೆ. ಸೆಕ್ಷನ್ 9 ಪ್ರಕಾರ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿ ಸರ್ಕಾರದ ವಶಕ್ಕೆ ಒಪ್ಪಿಸಬೇಕು. ಇದು ದೇಶದ ಆಸ್ತಿ, ಸರ್ಕಾರದ ಆಸ್ತಿ. ಒಬ್ಬ ವ್ಯಕ್ತಿ ಈ ಆಸ್ತಿ ತನಗೆ ಸೇರಿದ್ದು ಎಂದು ಅದನ್ನು ಅನುಭವಿಸುವಂತಿಲ್ಲ. ದೇಶದ ಪ್ರತಿಯೊಬ್ಬನಿಗೂ ಈ ಆಸ್ತಿಯ ಮೇಲೆ ಅಧಿಕಾರ ಇದೆ ಎಂದು ಪ್ರತಿಪಾದಿಸಿದರು.

ಆರೋಪಿ ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ನಟರಾಜ್ ಅವರು, ದಿನದಲ್ಲಿ 8-9 ಗಂಟೆ ವಿಚಾರಣೆ ನಡೆಸಿದ್ದರೂ ಉಪಯೋಗವಾಗಿದ್ದು 4 ಗಂಟೆ ಮಾತ್ರ. ತಮಗೆ ಗೊತ್ತಿದ್ದ ಮೂಲಭೂತ ವಿಷಯಗಳ ಬಗ್ಗೆಯೂ ಡಿಕೆ ಮಾಹಿತಿ ಹಂಚಿಕೊಂಡಿಲ್ಲ. ತನಿಖೆಗೆ ಸಂಪೂರ್ಣ ಅಸಹಕಾರ ತೋರಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡದಂತೆ ಮನವಿ ಮಾಡಿದರು.

ಡಿಕೆ ಶಿವಕುಮಾರ್ ಗೆ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. 

ದೆಹಲಿಯ ಅವರ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆ ದಾಳಿ ನಡಸಿದ ಸಂದರ್ಭದಲ್ಲಿ ದೊರೆತೆ ಅಕ್ರಮ ಹಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಡಿ.ಕೆ.ಶಿವಕುಮಾರ್ ಅವರ ಪುತ್ರಿಯನ್ನು ಜಾರಿ ನಿರ್ದೇಶನಾಲಯ ಕಳೆದ ವಾರವಷ್ಟೇ ವಿಚಾರಣೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com