ಬಾಬರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ನ್ಯಾಯಾಲಯಕ್ಕೆ ಶರಣಾದ ಕಲ್ಯಾಣ್ ಸಿಂಗ್

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಶುಕ್ರವಾರ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಶರಣಾದರು.
ಕಲ್ಯಾಣ್ ಸಿಂಗ್
ಕಲ್ಯಾಣ್ ಸಿಂಗ್

ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಶುಕ್ರವಾರ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಶರಣಾದರು.
  
ಬಳಿಕ ಅವರಿಗೆ ನ್ಯಾಯಾಲಯ 2 ಲಕ್ಷ ರೂ. ಬಾಂಡ್‌ನ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿತು.

ಇಂದು ಮಧ್ಯಾಹ್ನ, ಕಲ್ಯಾಣ್ ಸಿಂಗ್ ಅಯೋಧ್ಯೆಯ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರ ಮುಂದೆ ಶರಣಾಗತಿ ಅರ್ಜಿಯೊಂದಿಗೆ ಹಾಜರಾದರು. ಬಳಿಕ ನ್ಯಾಯಾಲಯ ಐಪಿಸಿ 153 (ಎ), 153(ಬಿ), 295 ಸೆಕ್ಷನ್‌ಗಳಡಿ ಆರೋಪ ದಾಖಲಿಸಿಕೊಂಡಿತು.

ಮಾಜಿ ಮುಖ್ಯಮಂತ್ರಿಯನ್ನು ಬಳಿಕ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಆದರೆ ಅವರ ವಕೀಲರು ಆರೋಗ್ಯದ ಕಾರಣ ಮುಂದಿಟ್ಟು ಜಾಮೀನಿಗೆ ಅರ್ಜಿ ಸಲ್ಲಿಸಿದರು. ಬಳಿಕ ನ್ಯಾಯಾಲಯ 2 ಲಕ್ಷ ರೂ. ಬಾಂಡ್‌ನ ಶ್ಯೂರಿಟಿಯೊಂದಿಗೆ ಕಲ್ಯಾಣ್ ಸಿಂಗ್‌ಗೆ ಜಾಮೀನು ಮಂಜೂರು ಮಾಡಿತು.
      
ಸೆಪ್ಟಂಬರ್ 27ರಂದು ತನ್ನ ಎದುರು ಕಲ್ಯಾಣ್ ಸಿಂಗ್ ಅವರನ್ನು ಹಾಜರುಪಡಿಸಬೇಕು ಎಂದು ಕಳೆದ ವಾರ ಸಿಬಿಐ ನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
        
ರಾಜಸ್ಥಾನದಲ್ಲಿ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಕಲ್ಯಾಣ್ ಸಿಂಗ್ ಅವರನ್ನು ತಮ್ಮ ಸ್ಥಾನದ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಇದರ ಬಗ್ಗೆ ಸ್ವಯಂಪ್ರೇರಿತವಾಗಿ ಗಮನಹರಿಸಿದ ನ್ಯಾಯಾಲಯವು, ಕಲ್ಯಾಣ್ ಸಿಂಗ್ ಅವರನ್ನು ಸೆಪ್ಟೆಂಬರ್ 27 ರಂದು ತಮ್ಮ ಎದುರು ಹಾಜರುಪಡಿಸುವಂತೆ ಸಿಬಿಐಗೆ ನಿರ್ದೇಶಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು.

ಬಿಜೆಪಿ ನಾಯಕ ಸಿಂಗ್ ಅವರು ಈಗ ಸಾಂವಿಧಾನಿಕ ಹುದ್ದೆಯಲ್ಲಿಲ್ಲ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ಸಿಬಿಐಗೆ ಸೂಚಿಸಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ರಾಜ್ಯಪಾಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯ ಈ ಸೂಚನೆ ನೀಡಿತ್ತು.

ಸೆಪ್ಟೆಂಬರ್ 9ರಂದು, ಸಿಂಗ್ ರಾಜಸ್ಥಾನದ ರಾಜ್ಯಪಾಲರಾಗಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಮತ್ತೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)ಸೇರಿಕೊಂಡರು, ರಾಜ್ಯಪಾಲರಾಗಿದ್ದಾಗ ಅವರಿಗೆ ವಿಚಾರಣೆಯಿಂದ ವಿನಾಯಿತಿ ನೀಡಲಾಗಿತ್ತು.

1992ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಕಲ್ಯಾಣ್ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಲ್ಯಾಣ್ ಸಿಂಗ್ ಜೊತೆಗೆ ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಸಾಧ್ವಿ ರಿತಾಂಭಾ, ಮಹಾಂತ್ ನೃತ್ಯ ಗೋಪಾಲ್ ದಾಸ್ ಮತ್ತು ಮುರಳಿ ಮನೋಹರ್ ಜೋಶಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದ ಎಲ್ಲ ಬಿಜೆಪಿ ಮುಖಂಡರು ಜಾಮೀನಿನ ಮೇಲೆ ಹೊರಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com