ನಿಜಾಮುದ್ದೀನ್ ಮರ್ಕಜ್: ಕನಿಷ್ಠ 400 ಮಂದಿಗೆ ಕೊರೋನಾ ವೈರಸ್ ಸೋಂಕು, ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳು ಕ್ವಾರಂಟೈನ್ ಗೆ- ಕೇಂದ್ರ ಸರ್ಕಾರ

ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಠ 400 ಮಂದಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಕಂಡು ಬಂದಿದ್ದು, ಇವರ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
Updated on

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಠ 400 ಮಂದಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಕಂಡು ಬಂದಿದ್ದು, ಇವರ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಠ 400 ಮಂದಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು  ಕಂಡು ಬಂದಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಅಂತೆಯೇ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ಇನ್ನೂ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲರನ್ನೂ ಹುಡುಕುವ  ಕಾರ್ಯ ಭರದಿಂದ ಸಾಗಿದೆ. ನೂರಾರು ವೈದ್ಯಕೀಯ ಪರೀಕ್ಷೆಗಳ ವರದಿ ಬರಬೇಕಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭೆ ಬಳಿಕ ದೇಶಾದ್ಯಂತ ಹಂಚಿಹೋಗಿದ್ದಾರೆ. ತಮಿಳುನಾಡು ಒಂದರಲ್ಲೇ 173 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಬಹುತೇಕರು ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರೇ  ಆಗಿದ್ದಾರೆ. ಪ್ರಸ್ತುತ ಮಸೀದಿಯಿಂದ 2000ಕ್ಕೂ ಅಧಿಕಮಂದಿಯನ್ನು ಹೊರಗೆ ಕಳುಹಿಸಿ ಮಸೀದಿ ತೆರವುಗೊಳಿಸಲಾಗಿದೆ. ಈ ಪೈಕಿ 1804 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 334 ಮಂದಿಯನ್ನು ಸೋಂಕು ಪತ್ತೆ ಹಿನ್ನಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  ಈ ವರೆಗೂ 12 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಪ್ರಧಾನಿ ಮೋದಿ ಹಾಲಿ ಕ್ಲಿಷ್ಠ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಜಿಲ್ಲಾ ಮಟ್ಟದಲ್ಲಿ ನಿಭಾಯಿಸುವಂತೆ ಆಗ್ರಹಿಸಿದ್ದಾರೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದರು.

ವೈದ್ಯರ ವೈಯುಕ್ತಿಕ ರಕ್ಷಣಾ ಕವಚಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ
ಇದೇ ವೇಳೆ ವೈದ್ಯರ ವೈಯುಕ್ತಿಕ ರಕ್ಷಣಾ ಕವಚಗಳು ಮತ್ತು ಮಾಸ್ಕ್ ಗಳ ಕೊರತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್ ಅವರು, ಈ ವಿಚಾರವಾಗಿ ನಾವು ಐಸಿಎಂಆರ್ ಜೊತೆ ಚರ್ಚೆ ನಡೆಸಿದ್ದು, ಒಂದೂವರೆ ಕೋಟಿ ವೈದ್ಯರ ವೈಯುಕ್ತಿಕ ರಕ್ಷಣಾ ಕವಚಗಳು (personal  protective equipment-PPE) ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಂತೆಯೇ ಒಂದು ಕೋಟಿ ದೇಶೀಯ ನಿರ್ಮಿತ ಎನ್ 95 ಮಾಸ್ಕ್ ಗಳ ತಯಾರಿಕೆಗೆ ಕ್ರಮ ಕೈಗೊಂಡಿದ್ದೇವೆ. ಇದಲ್ಲದೆ ಸಾಮಾನ್ಯ ಮಾಸ್ಕ್ ಗಳ ತಯಾರಿಕೆ ಕಾರ್ಯಕ್ಕೂ ವೇಗ ನೀಡಿದ್ದೇವೆ. ಹೆಚ್ಚುವರಿ  ಸಿಬ್ಬಂದಿಗಳ ನೇಮಕಕ್ಕೆ ತಯಾರಿಕಾ ಕಂಪನಿಗಳಿಗೆ ಸೂಚಿಸಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಮಾಸ್ಕ್ ಗಳ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಗೌರವಿಸಿ
ಕೊರೋನಾ ವೈರಸ್ ನಿರ್ಮೂಲನೆ ಮಾಡುವ ಭಾರತದ ಹೋರಾಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಸೈನಿಕರು ಮುಂಚೂಣಿಯಲ್ಲಿ ನಿಂತಿದ್ದಾರೆ. ಅವರ ಪ್ರಾಣವನ್ನು ಪಣವಾಗಿಟ್ಟು ನಮ್ಮ ಪ್ರಾಣ ರಕ್ಷಣೆಗೆ ನಿಂತಿದ್ದಾರೆ. ಹೀಗಾಗಿ ಮೊದಲು ಅವರಿಗೆ  ಗೌರವ ನೀಡಿ. ದೇಶದಲ್ಲಿ ವೈದ್ಯರ ಸಂಖ್ಯೆ ತೀರಾ ಕಡಿಮೆ ಇದ್ದು, ಈ ಪೈಕಿ ಹಲವು ವೈದ್ಯರಿಗೇ ಕೊರೋನಾ ಸೋಂಕು ತಗುಲಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆ ನಮ್ಮ ಹೊಣೆ. ಲಾಕ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸೋಂಕು  ಪ್ರಸರಿಸದಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅವರ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆಯಾಗಿರುತ್ತದೆ ಎಂದು ಅಗರ್ವಾಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com