ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್ ಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ.
ಏಪ್ರಿಲ್ 15 ರಿಂದ ಮೇ.3 ರವರೆಗೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ್ದ ಸುಮಾರು 39 ಲಕ್ಷ ಟಿಕೆಟ್ ಗಳನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಗೊಳಿಸಲು ನಿರ್ಧರಿಸಿದೆ. ಮೇ.3 ರವರೆಗೆ ರದ್ದಾದ ರೈಲುಗಳ ಟಿಕೆಟ್ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೌಂಟರ್ ಗಳಲ್ಲಿ ಬುಕ್ ಮಾಡಿದವರು ಜುಲೈ 31 ರವರೆಗೆ ಮರುಪಾವತಿ ಪಡೆದುಕೊಳ್ಳಬಹುದಾಗಿದೆ.
ಮುಂಗಡ ಪಾವತಿಗೂ ಬ್ರೇಕ್..!
ಅಂತೆಯೇ ರೈಲ್ವೇ ಇಲಾಖೆ ಮೇ. 3 ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಟಿಕೆಟ್ ಕೌಂಟರ್ ಗಳನ್ನು ಮುಚ್ಚಲಿದ್ದ್ದು, ಸರ್ಕಾರದ ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ಎಲ್ ರೀತಿಯ ರೈಲು ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಮತಿ ಇಲ್ಲ ಎಂದು ಹೇಳಿದೆ.
ಲಾಕ್ ಡೌನ್ ಮುಕ್ತಾಯದ ಹಿನ್ನಲೆಯಲ್ಲಿ ಮತ್ತೆ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಡುವ ಊಹಾಪೋಹದ ಮೇರೆಗೆ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನೂರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸೇರಿದ್ದರು. ಆದರೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದ್ದರು. ಅಲ್ಲದೆ ಸುಳ್ಳು ವದಂತಿ ಹಬ್ಬಿಸಿ ಪ್ರಚೋದನೆ ನೀಡಿ ಸಾವಿರಾರು ವಲಸಿಗರು ನಿನ್ನೆ ಮುಂಬೈಯ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ಮಾಡಿದ ವಿನಯ್ ದುಬೆಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಸ್ವಘೋಷಿತ ಕಾರ್ಮಿಕ ನಾಯಕನಾಗಿರುವ ವಿನಯ್ ದುಬೆ ಸೋಷಿಯಲ್ ಮೀಡಿಯಾಗಳಲ್ಲಿ ಚಲೋ ಘರ್ ಕಿ(ಮನೆಗೆ ಹೋಗೋಣ)ಎಂಬ ಅಭಿಯಾನವನ್ನು ಆರಂಭಿಸಿದ್ದರು. ಇದರಿಂದ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿದ್ದ ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ಪ್ರಚೋದಿಸಿದ್ದ.
Advertisement