ಕೊರೋನಾ ವೈರಸ್ ಗೆ ವ್ಯಾಪಾರಿ ಬಲಿ; ದೆಹಲಿಯಲ್ಲಿರುವ ಏಷ್ಯಾದ ಅತೀ ದೊಡ್ಡ ಹಣ್ಣು ತರಕಾರಿ ಮಾರುಕಟ್ಟೆ ಬಂದ್!
ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ವ್ಯಾಪಾರಿಯೊಬ್ಬ ಬಲಿಯಾಗಿದ್ದು, ದೆಹಲಿಯಲ್ಲಿರುವ ಏಷ್ಯಾದ ಅತೀ ದೊಡ್ಡ ಹಣ್ಣು ತರಕಾರಿ ಮಾರುಕಟ್ಟೆ ಅಜಾದ್ ಪುರ್ ಮಂಡಿ ಸ್ಥಗಿತವಾಗಿದೆ.
ಹೌದು.. ಏಷ್ಯಾದ ಅತೀ ದೊಡ್ಡ ಹಣ್ಣು ತರಕಾರಿ ಮಾರುಕಟ್ಟೆ ಎಂದೇ ಖ್ಯಾತಿ ಗಳಿಸಿರುವ ಅಜಾದ್ ಪುರ್ ಮಾರುಕಟ್ಟೆ ಇದೀಗ ಬಂದ್ ಆಗಿದ್ದು, ಇಲ್ಲಿನ ಸುಮಾರು 300ಕ್ಕೂ ಅಧಿಕ ಅಂಗಡಿ ಮಾಲೀಕರು ಇದೀಗ ವೈರಸ್ ಸೋಂಕು ಭೀತಿಯಲ್ಲಿದ್ದಾರೆ. ಇಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರಿ ಸಾವನ್ನಪ್ಪಿದ ಬೆನ್ನಲ್ಲೇ ಇಲ್ಲಿನ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದು, ಇಡೀ ಮಾರುಕಟ್ಟೆಯನ್ನೇ ಬಂದ್ ಮಾಡಿದ್ದಾರೆ. ಪರಿಣಾಮ ಸುಮಾರು 100 ಎಕರೆಯಲ್ಲಿನ ಸುಮಾರು 300 ಅಂಗಡಿಗಳು ಬಂದ್ ಆಗಿದ್ದು, ದೆಹಲಿಯಲ್ಲಿ ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಇಲ್ಲಿ ಸುಮಾರು 2800ಕ್ಕೂ ಅಧಿಕ ದಿನಗೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇನ್ನು ಕೇಂದ್ರ ಮತ್ತು ದೆಹಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಇಲ್ಲಿನ ವ್ಯಾಪಾರಿಗಳು, ಈ ಪ್ರದೇಶ ಕೋವಿಡ್-19 ಟೆಸ್ಟ್ ಅನ್ನು ವೇಗವಾಗಿ ನಡೆಸುವಂತೆ ಆಗ್ರಹಿಸಿದ್ದಾರೆ. ಅಜಾದ್ ಪುರ ಮಂಡಿಯಲ್ಲಿ ಓರ್ವ ಕೊರೋನಾ ಸೋಂಕಿತ ಸಾವನ್ನಪ್ಪಿದ್ದರೆ, ಮತ್ತೆ ಇಬ್ಬರು ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರ ಪೈಕಿ ಓರ್ವ ಸಾವನ್ನಪ್ಪಿದ ವ್ಯಕ್ತಿ 57 ವರ್ಷದ ವ್ಯಾಪಾರಿಯ ಸಂಬಂಧಿಯಾಗಿದ್ದು, ಮತ್ತೋರ್ವ ಅಂಗಡಿ ನೌಕರನಾಗಿದ್ದ. ಇಬ್ಬರೂ ಮೃತ ವ್ಯಕ್ತಿಯ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹೀಗಾಗಿ ಇವರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಿತ ವ್ಯಕ್ತಿಗಳನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.
ಇತ್ತೀಚೆಗಷ್ಟೇ ದೆಹಲಿ ಸರ್ಕಾರ ರೈತರ ನೆರವಿಗಾಗಿ ಸಮ-ಬೆಸ ನೀತಿ ಜಾರಿಗೆ ತಂದು ಹಣ್ಣು ಮತ್ತು ತರಕಾರಿ ಅಂಗಡಿಗಳನ್ನು 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಿತ್ತು. ಇನ್ನು ದೆಹಲಿಯಲ್ಲಿ ಈ ವರೆಗೂ 2,376 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ