ವಿದೇಶದಿಂದ ಮರಳಿದ ಬಳಿಕ ಲಖನೌನಲ್ಲಿ ಪಾರ್ಟಿ: ಗಾಯಕಿ ಕನಿಕಾ ಕಪೂರ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ಲಖನೌ: ಕೊರೋನಾದಿಂದ ಗುಣಮುಖರದಿ ಇದೀಗ ಗುಣಮುಖರಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಹೇಳಿಕೆಯನ್ನು ಉತ್ತರಪ್ರದೇಶ ಪೊಲೀಸರು ಬುಧವಾರ ದಾಖಲು ಮಾಡಿಕೊಂಡಿದ್ದಾರೆ.
ವಿದೇಶದಿಂದ ಬಂದ ಬಳಿಕ ಕ್ವಾರಂಟೈನ್'ಗೊಳಗಾಗದೆ, ಲಖನೌನಲ್ಲಿ ಹಲವು ಪಾರ್ಟಿಗಳಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಕನಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ 20ರಂದು ಕನಿಕಾ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು.
ಉದ್ದೇಶ ಪೂರ್ವಕ ಹಾಗೂ ನಿರ್ಲಕ್ಷ್ಯದಿಂದಾಗಿ ವೈರಸ್ ಹರಡಿರುವುದಾಗಿ ಕನಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಕನಿಕಾ ಅವರು ವಿದೇಶದಿಂದ ಬಂದ ಕೂಡಲೇ ನಿಯಮಗಳನ್ನು ಪಾಲನೆ ಮಾಡದೆ, ಕ್ವಾರಂಟೈನ್ ಒಳಗಾಗದೆ ಹಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದರು, ಈ ಪಾರ್ಟಿಯಲ್ಲಿ ಹಲವು ರಾಜಕೀಯ ವಲಯದ ಪ್ರಮುಖರು ಭಾಗವಹಿಸಿದ್ದರು.
ಪಾರ್ಟಿಯಲ್ಲಿ ಕಾಣಿಸಿಕೊಂಡ ಮರು ದಿನವೇ ಕನಿಕಾ ಅವರಲ್ಲಿ ಕೊರೋನಾ ಇರುವುದು ದೃಢಪಟ್ಟಿತ್ತು. ಘಟನೆ ಬಳಿಕ ಸಾಕಷ್ಟು ರಾಜಕೀಯ ನಾಯಕರು ಆತಂಕಕ್ಕೊಳಗಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕನಿಕಾ ಅವರು, ಇದೀಗ ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ವಿದೇಶದಿಂದ ಬಂದ ಬಳಿಕ ಕನಿಕಾ ಅವರು ಭಾಗಿಯಾಗಿದ್ದ ಕಾರ್ಯಕ್ರಮಗಳ ಕುರಿತು ಎಲ್ಲಾ ಮಾಹಿತಿಗಳನ್ನು ಪಡೆಯಲಾಗಿದೆ. ಕನಿಕಾ ಅವರ ಪಾಸ್ಪೋರ್ಟ್, ವಿಮಾನ ಟಿಕೆಟ್ ಸೇರಿದಂತೆ ವಿವಿಧ ದಾಖಲೆಗಳ ಫೋಟೋ ಕಾಪಿಗಳನ್ನು ತೆಗೆದುಕೊಳ್ಳಲಾಗಿದೆ. ಮಹಾನಗರದಲ್ಲಿರುವ ಅವರ ನಿವಾಸದಲ್ಲಿಯೇ ಕನಿಕಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಲಖನೌ ಸರೋಜಿನಿ ನಗರದ ಇನ್ಸ್'ಪೆಕ್ಟರ್ ಆನಂದ್ ಶಶಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ