ಸುಶಾಂತ್ ಪ್ರಕರಣ: ಐಪಿಎಸ್ ಅಧಿಕಾರಿಗೆ ಮುಂಬೈ ನಿಂದ ಹೊರಡಲು ಬಿಡದಿದ್ದರೆ ಕಾನೂನು ಕ್ರಮ- ಬಿಹಾರ ಡಿಜಿಪಿ
ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆ ನಡೆಸಲು ಮುಂಬೈ ಗೆ ತೆರಳಿರುವ ಬಿಹಾರದ ಅಧಿಕಾರಿಗೆ ವಾಪಸ್ಸಾಗಲು ಬಿಡದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಹಾರದ ಡಿಜಿಪಿ ಎಚ್ಚರಿಸಿದ್ದಾರೆ.
ಡಿಜಿಪಿ ಗುಪ್ತೇಶ್ವರ್ ಪಾಂಡೆ ಮುಂಬೈ ಪೊಲೀಸರ ವರ್ತನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಒತ್ತಾಯಪೂರ್ವಕವಾಗಿ ಕ್ವಾರಂಟೈನ್ ನಿಂದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಿಡದೇ ಇದ್ದಲ್ಲಿ ಕೋರ್ಟ್ ಮೊರೆ ಹೋಗಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಅಡ್ವೊಕೇಟ್ ಜನರಲ್ ಅವರನ್ನು ಈ ವಿಷಯವಾಗಿ ಸಂಪರ್ಕಿಸಿ ಕೋರ್ಟ್ ಮೊರೆ ಹೋಗಲಾಗುವುದು ಎಂದು ಪಾಂಡೇ ತಿಳಿಸಿದ್ದಾರೆ.
ಪಾಟ್ನಾ ಸಿಟಿ (ಈಸ್ಟ್) ನ ಎಸ್ ಪಿ ಆಗಿ ತಿವಾರಿ ಕಾರ್ಯನಿರ್ವಹಿಸುತ್ತಿದ್ದಾರೆ. "ಇದೊಂದು ಗೃಹಬಂಧನವಾಗಿದೆ. ನಮ್ಮ ಅಧಿಕಾರಿ ಮುಂಬೈ ಗೆ ತೆರಳಿ ಲಿಖಿತ ಮನವಿ ಸಲ್ಲಿಸಿದ್ದರು, ನಾನೂ ಸಹ ಮುಂಬೈ ಡಿಜಿಪಿಗೆ ಎಸ್ಎಂಎಸ್ ಮೂಲಕ ವಿನಯ್ ತಿವಾರಿ ಮೂರು ದಿನಗಳು ತನಿಖೆಗಾಗಿ ಮುಂಬೈ ನಲ್ಲಿರಲಿದ್ದಾರೆ ಎಂದು ತಿಳಿಸಿದ್ದೆ ಎಂದು ಪಾಂಡೇ ಹೇಳಿದ್ದಾರೆ.
ಮುಂಬೈ ನಲ್ಲಿ ಐಪಿಎಸ್ ಮೆಸ್ ನಲ್ಲಿ ತಂಗಲು ವ್ಯವಸ್ಥೆ ಕೇಳಿದ್ದರು. ಆದರೆ ನೀಡಲಿಲ್ಲ. ಅದನ್ನು ಬಿಡಿ, ಆದರೆ ಮುಂಬೈ ತಲುಪುತ್ತಿದ್ದಂತೆಯೇ ಅವರನ್ನು ಒತ್ತಾಯಪೂರ್ವಕ ಕ್ವಾರಂಟೈನ್ ಗೆ ಒಳಪಡಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಪಾಂಡೇ ಹೇಳಿದ್ದಾರೆ.
ತಿವಾರಿ ಅವರಿಗೆ ಕ್ವಾರಂಟೈನ್ ನಿಂದ ವಿನಾಯಿತಿ ನೀಡುವ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಬಿಎಂಸಿ ಮುಖ್ಯಸ್ಥರಿಗೆ ಪಾಟ್ನಾ ಝೋನ್ ಐಜಿ ಪತ್ರ ಬರೆದಿದ್ದರೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ