ಪಾಕಿಸ್ತಾನದ ನುಸುಳುಕೋರನ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ
ನವದೆಹಲಿ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳುತ್ತಿದ್ದ ನುಸುಳುಕೋರನನ್ನು ಗಡಿ ಭದ್ರತಾ ಪಡೆಯ ಯೋಧರು ಶುಕ್ರವಾರ ತಡರಾತ್ರಿ ಮುಂಜಾನೆ ಹೊಡೆದುರುಳಿಸಿದ್ದಾರೆ.
ರಾಜಸ್ಥಾನದ ಬರ್ಮೆರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದ್ದು, ಒಳನುಸುಳಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆಯು(ಬಿಎಸ್‌ಎಫ್) ಶುಕ್ರವಾರ ತಡರಾತ್ರಿ ಹತ್ಯೆ ಮಾಡಿದೆ.
‘ಅಂತಾರಾಷ್ಟ್ರೀಯ ಗಡಿ ಮೂಲಕ ಒಳನುಸುಳಲು ಯತ್ನಿಸಿದ ವ್ಯಕ್ತಿಗೆ ಬಿಎಸ್‌ಎಫ್ ಯೋಧರು ಎಚ್ಚರಿಕೆ ನೀಡಿದರು. ಆದರೆ, ಆತ ಗಡಿದಾಟಲು ಪ್ರಯತ್ನಿಸಿದ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಈತನನ್ನು ಸೈನಿಕರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬಕ್ಸಾರ್ ಪ್ರದೇಶದ ಬಳಿ ಘಟನೆ ನಡೆದಿದ್ದು. ಈ ವೇಳೆ ಪಾಕಿಸ್ತಾನದಿಂದ 10–15 ಟಾರ್ಚ್‌ಗಳ ಬೆಳಕು ಕಾಣಿಸಿಕೊಂಡಿತ್ತು ಮತ್ತು ಶಬ್ದ ಕೇಳಿ ಬಂದಿತ್ತು. ಈ ವೇಳೆ ಸೈನಿಕರು ಎಚ್ಚರಿಕೆ ನೀಡಿದರು. ಆದರೂ ಒಳನುಸುಳುವಿಕೆ ಮುಂದುವರೆದಾಗ ಶಬ್ದ ಬಂದ ಜಾಗಕ್ಕೆ ಸೈನಿಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಗಿಡಗಂಟೆಗಳಲ್ಲಿ ಓರ್ವ ಅವಿತುಕೊಂಡಿದ್ದ. ಕೂಡಲೇ ಸ್ಥಳಕ್ಕೆ ಸೈನಿಕರು ದೌಡಾಯಿಸಿದ ಸೈನಿಕರು ಶೋಧ ನಡೆಸಿದಾಗ ಅಲ್ಲಿ ಓರ್ವ ನುಸುಳುಕೋರನ ಶವ ಪತ್ತೆಯಾಗಿತ್ತು.
ಪ್ರಸ್ತುತ ಶವನ್ನು ವಶಕ್ಕೆ ಪಡೆದಿರುವ ಯೋಧರು, ಘಟನಾ ಸ್ಥಳದಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಇದೇ ಆಗಸ್ಟ್ 15ರಂದು ನಡೆಯಲಿರುವ ಸ್ವತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆ ಎಂಬ ಎಚ್ಚರಿಕೆ ಹಿನ್ನಲೆಯಲ್ಲಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದೇ ಸಂದರ್ಭದಲ್ಲಿ ಗಡಿಯಲ್ಲೂ ಒಳ ನುಸುಳುವಿಕೆಯಂತಹ ಘಟನೆಗಳ ಹೆಚ್ಚಾಗಿ ಕಂಡಬರುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

