ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೂ ಅಪ್ಪನ ಆಸ್ತಿಯಲ್ಲಿ ಸಮ ಪ್ರಮಾಣದ ಹಕ್ಕಿದೆ: ಸುಪ್ರೀಂ ಕೋರ್ಟ್
ನವದೆಹಲಿ: ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೂ ಅಪ್ಪನ ಆಸ್ತಿಯಲ್ಲಿ ಸಮ ಪ್ರಮಾಣದ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, '2005ರ ಹಿಂದೂ ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ ಪ್ರಕಾರ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇದೆ ಎಂದು ಹೇಳಿದೆ. ಅಲ್ಲದೆ 2005ಕ್ಕಿಂತ ಮೊದಲೇ ತಂದೆ ಸತ್ತಿದ್ದರೂ ಆಸ್ತಿ ಮೇಲೆ ಮಗಳಿಗೆ ಹಕ್ಕು ಇರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2005ರಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆದರೆ, 2005ಕ್ಕಿಂತ ಮುಂಚಿನ ಪ್ರಕರಣಗಳಿಗೆ ಇದು ಅನ್ವಯ ಆಗುತ್ತದೋ ಅಥವಾ ಇಲ್ಲವೋ ಎಂಬ ಗೊಂದಲ ಇತ್ತು. ಸುಪ್ರೀಂ ನ್ಯಾಯಪೀಠ ನೀಡಿದ ಇವತ್ತಿನ ತೀರ್ಪಿನಲ್ಲಿ ಈ ಗೊಂದಲಕ್ಕೆ ತೆರೆ ಎಳೆದಿದೆ. 2005ರಲ್ಲಿ ತಂದೆ ಮತ್ತು ಮಗಳು ಜೀವಂತವಾಗಿದ್ದರೆ ಮಾತ್ರ ಅಪ್ಪನ ಆಸ್ತಿಯಲ್ಲಿ ಮಗಳು ಆಸ್ತಿ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಈ ಮೊದಲಿನ ಕೆಲ ಪ್ರಕರಣಗಳಲ್ಲಿ ಇದೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠಗಳು ತೀರ್ಪು ನೀಡಿದ್ದರು. ಅದರಂತೆ ಆ ವಿಚಾರದಲ್ಲಿ ಗೊಂದಲ ಉಳಿದೇ ಇತ್ತು. ಈಗ ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ಗೊಂದಲ ಬಗೆಹರಿಸಿದೆ.
ಈಗ ತಂದೆ ಮತ್ತು ಮಗಳು 2005ರಲ್ಲಿ ಬದುಕಿರಲಿ ಅಥವಾ ನಿಧನಗೊಂಡಿರಲಿ ಮಗಳಿಗೆ ಆಸ್ತಿ ಹಕ್ಕು ಇದ್ದೇ ಇರುತ್ತದೆ. 2005ಕ್ಕಿಂತ ಮುಂಚೆಯೇ ಮಗಳು ಸಾವನ್ನಪ್ಪಿದ್ದರೂ ಆಕೆಯ ಮಕ್ಕಳು ಆ ಆಸ್ತಿಯ ಮೇಲೆ ಹಕ್ಕು ಸಾಧಿಸ ಬಹುದಾಗಿದೆ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದ್ದೇ ಇರುತ್ತದೆ ಎಂಬುದು ಸರ್ವೋಚ್ಚ ನ್ಯಾಯಪೀಠದ ತೀರ್ಪಿನಿಂದ ಸ್ಪಷ್ಟವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ