ಶ್ರೀನಗರ: ಕುಪ್ವಾರ ಉಗ್ರ ದಾಳಿ ಬೆನ್ನಲ್ಲೇ ಇತ್ತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉಗ್ರನೋರ್ವನನ್ನು ಬಂಧಿಸಿದ್ದಾರೆ.
ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್ ನಲ್ಲಿ ಸಕ್ರಿಯ ಎಲ್ಇಟಿಯ ಅಖಿಬ್ ಅಹ್ಮದ್ ರಾದರ್ ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಕುಪ್ವಾರದಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಬಂಡಿಪೋರದಲ್ಲಿ ತನಿಖೆ ನಡೆಸುತ್ತಿದ್ದರು. ಈ ವೇಳೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಶೋಧ ನಡೆಸಿದಾಗ ಓರ್ವ ಸಕ್ರಿಯ ಉಗ್ರಗಾಮಿ ಪತ್ತೆಯಾಗಿದ್ದ. ಆತನನ್ನು ಕೂಡಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಹಂದ್ವಾರ ಮತ್ತು ಬಂಡಿಪೋರಾದಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಗಾಗಿ 13 ರಾಷ್ಟ್ರೀಯ ರೈಫಲ್ಸ್ ತಂಡ, 32 ಆರ್ ಆರ್ ಮತ್ತು 92 ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಹಜಿನ್ ಪ್ರದೇಶದಲ್ಲಿ ನಡೆದ ಶೋಧ ಕಾರ್ಯದಲ್ಲಿ ಉಗ್ರ ಪತ್ತೆಯಾಗಿದ್ದ ಎಂದು ಬಂಡಿಪೋರಾ ಡಿಜಿ ಹೇಳಿದ್ದಾರೆ. ಬಂಧಿತ ಉಗ್ರನಿಂದ ಶಸ್ತ್ರಾಸ್ತ್ರಗಳು, ಬುಲೆಟ್ ಗಳು, ಕೆಲ ಸ್ಫೋಟಕ ಸಾಮಾಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕ್ರಾಲ್ ಗುಂದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Advertisement