
ರಾಂಚಿ: ಜಾರ್ಖಂಡ್ ನ ಮಾಜಿ ಸಿಎಂ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸಂಸ್ಥಾಪಕ ಶಿಬು ಸೊರೇನ್ ಗೆ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಅವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಿಬು ಸೊರೇನ್ ಮಾತ್ರವಲ್ಲದೇ ಅವರ ಪತ್ನಿಗೂ ಕೊರೋನಾ ಸೋಂಕು ದೃಢವಾಗಿದ್ದು, ಈ ಬಗ್ಗೆ ಶಿಬು ಸೊರೇನ್ ಅವರ ಪುತ್ರ ಹಾಗೂ ಜಾರ್ಖಂಡ್ ನ ಹಾಲಿ ಸಿಎಂ ಹೇಮಂತ್ ಸೊರೇನ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶುಕ್ರವಾರ ರಾತ್ರಿ ಶಿಬು ಸೊರೇನ್ ಅವರಿಗೆ ಸೋಂಕಿರುವುದು ದೃಢವಾಗಿತ್ತು. ಇಂದು ನಮ್ಮ ತಾಯಿಗೂ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ನಿಮ್ಮ ಪ್ರೀತಿ ಮತ್ತು ಹಾರೈಕೆಯಿಂದ ತಂದೆಯವರು ಬೇಗ ಗುಣಮುಖರಾಗುತ್ತಾರೆ ಎಂದು ಹೇಮಂತ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳಷ್ಟೇ ಜಾರ್ಖಂಡ್ ಸಚಿವರೊಬ್ಬರಿಗೆ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ಸಿಎಂ ಹೇಮಂತ್ ಸೊರೇನ್ ಹಾಗೂ ಅವರ ಪತ್ನಿ ಕಲ್ಪನಾ ಅವರು ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಇಬ್ಬರ ವರದಿ ನೆಗೆಟಿವ್ ಬಂದಿತ್ತು.
Advertisement