ಸೇನಾಪಡೆಗಳ ಮೇಲೆ ಗ್ರೆನೇಡ್ ಎಸೆದ ಉಗ್ರರು: ಗುರಿ ತಪ್ಪಿ ರಸ್ತೆಯಲ್ಲೇ ಸ್ಫೋಟ, 6 ನಾಗರೀಕರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರತೀಯ ಸೇನಾಪಡೆಯ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ ಒಂದು ಗುರಿತಪ್ಪಿ ರಸ್ತೆಯಲ್ಲಿಯೇ ಸ್ಫೋಟಗೊಂಡಿದ್ದು, ಪರಿಣಾಮ ಸ್ಥಳದಲ್ಲಿದ್ದ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಬಾರಾಮುಲ್ಲಾದ ರಸ್ತೆಯ ಬಳಿಕ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದವು. ರಸ್ತೆ ದಾಟುವ ಸಂದರ್ಭದಲ್ಲಿ ಸೇನಾಪಡೆಗಳ ವಾಹನಗಳ ಮೇಲೆ ಉಗ್ರರು ಏಕಾಏಕಿ ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ವೇಳೆ ಗುರಿ ತಪ್ಪಿ ರಸ್ತೆಯೊಂದರಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲಿದ್ದ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ನಾಗರೀಕರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, 6 ಮಂದಿಯ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಗ್ರೆನೇಡ್ ದಾಳಿ ನಡೆಸಿದ ಕೂಡಲೇ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದು, ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ