ಕೇರಳದಲ್ಲಿ ಆರ್ ಜಿ ಸಿಬಿ ಕ್ಯಾಂಪಸ್ ಗೆ ಗೋಳವಲ್ಕರ್ ಹೆಸರು!: ಕೋಲಾಹಲ, ವಿರೋಧ
ತಿರುವನಂತಪುರಂ: ಕೇರಳದಲ್ಲಿ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ (ಆರ್ ಜಿಸಿಬಿ)ಯ ಎರಡನೇ ಕ್ಯಾಂಪಸ್ ಗೆ ಆರ್ ಎಸ್ಎಸ್ ನ ಸರಸಂಘಚಾಲಕರಾಗಿದ್ದ ಗೋಳವಲ್ಕರ್ ಅವರ ಹೆಸರು ನಾಮಕರಣ ಮಾಡುವುದಕ್ಕೆ ಆಕ್ಷೇಪ, ವಿರೋಧ ವ್ಯಕ್ತವಾಗತೊಡಗಿದೆ.
ಆಡಳಿತಾರೂಢ ಸಿಪಿಐ-ಎಂ ಹಾಗೂ ವಿಪಕ್ಷ ಕಾಂಗ್ರೆಸ್ ಗೋಳವಲ್ಕರ್ ಅವರ ಹೆಸರನ್ನು ನಾಮಕರಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕೋಮುವಾದದ ಕಾಯಿಲೆಯನ್ನು ಹರಡುವುದನ್ನು ಬಿಟ್ಟು, ವಿಜ್ಞಾನಕ್ಕೆ ಗೋಳ್ವಲ್ಕರ್ ಅವರ ಕೊಡುಗೆಯೇನು? ಎಂದು ತಿರುವನಂತಪುರಂ ನ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.
ಕೇರಳದ ಆರ್ ಜಿಸಿಬಿಯ ಎರಡನೇ ಕ್ಯಾಂಪಸ್ ಗೆ "ಶ್ರೀ ಗುರೂಜಿ ಮಾಧವ್ ಸದಾಶಿವ್ ಗೋಳವಲ್ಕರ್ ಕ್ಯಾನ್ಸರ್ ಮತ್ತು ವೈರಲ್ ಸೋಂಕು ಸಂಕೀರ್ಣ ರೋಗದ ರಾಷ್ಟ್ರೀಯ ಕೇಂದ್ರ ಎಂದು ನಾಮಕರಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ವೈಜ್ಞಾನಿಕ ನಾವೀನ್ಯತೆಗೆ ಪ್ರೇರಣೆ ನೀಡಿ, ಅನುದಾನವನ್ನೂ ಘೋಷಿಸಿದ್ದರು. ಇದೇ ರೀತಿ ವೈಜ್ಞಾನಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದವರ್ಯಾರೂ ಬಿಜೆಪಿಯಲ್ಲಿಲ್ಲವೆ? 1966 ರಲ್ಲಿ ವಿಹೆಚ್ ಪಿ ಸಭೆಯಲ್ಲಿ ಧರ್ಮ ಶ್ರೇಷ್ಠತೆಯನ್ನು ವಿಜ್ಞಾನಕ್ಕಿಂತ ಮಿಗಿಲಾದದ್ದು ಎಂದು ಹೇಳಿದ್ದ, ಹಿಟ್ಲರ್ ಅಭಿಮಾನಿಯಾಗಿದ್ದ ಗೋಳ್ವಲ್ಕರ್ ಅವರನ್ನು ಭಾರತ ಸರ್ಕಾರ ಸ್ಮರಿಸಬೇಕೆ? ಎಂದು ತರೂರ್ ಪ್ರಶ್ನಿಸಿದ್ದಾರೆ.
ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ, ಕೇರಳದ ಮಾಜಿ ಸಚಿವ ಎಂಎ ಬೇಬಿ ಮಾತನಾಡಿ, ಈ ಬೆಳವಣಿಗೆ ದುರದೃಷ್ಟಕರ, ಕ್ರೂರ, ಕೇರಳ ಸಮಾಜವನ್ನು ಒಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಕೇರಳದ ಜನತೆ ಇದನ್ನು ಬಲವಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ