ಭತ್ತ-ಗೋಧಿಗೆ ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಿರುವ ಮೋದಿ ಸರ್ಕಾರ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭತ್ತ-ಗೋಧಿ ಬೆಳೆದಿರುವ ರೈತರಿಗೆ ಈ ಹಿಂದಿದ್ದ ಯುಪಿಎ ಸರ್ಕಾರಕ್ಕಿಂತಲೂ ದುಪ್ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಿದೆ.
ಯುಪಿಎ ಸರ್ಕಾರ 2009-2014 ರ ಅವಧಿಯಲ್ಲಿ ಭತ್ತ-ಗೋಧಿ ಬೆಳೆದ ರೈತರಿಗೆ 3.74 ಲಕ್ಷ ರೂಪಾಯಿ ಕನಿಷ್ಟ ಬೆಂಬಲ ಬೆಲೆ ನೀಡಿದ್ದರೆ, ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2014-19 ರ ಅವಧಿಯಲ್ಲಿ 8 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಕನಿಷ್ಟ ಬೆಂಬಲ ಬೆಲೆ ನೀಡಿದೆ.
ಇದಿಷ್ಟೇ ಅಲ್ಲದೇ ಮೋದಿ ಸರ್ಕಾರ ಯುಪಿಎ ಸರ್ಕಾರಕ್ಕಿಂತಲೂ 74 ಪಟ್ಟು ಹೆಚ್ಚು ಕಾಳು (ದ್ವಿದಳ ಧಾನ್ಯ)ಗಳನ್ನು ರೈತರಿಂದ ಖರೀದಿಸಿದೆ ಎನ್ನುತ್ತಿದೆ ಅಂಕಿ-ಅಂಶಗಳು ಯುಪಿಎ ಸರ್ಕಾರ 1.52 ಲಕ್ಷ ಟನ್ ನಷ್ಟು ಕಾಳುಗಳನ್ನು ಖರೀದಿಸಿದ್ದರೆ 2014-19 ವರೆಗೂ ಮೋದಿ ಸರ್ಕಾರ 112.28 ಲಕ್ಷ ಟನ್ ನಷ್ಟು ಧಾನ್ಯಗಳನ್ನು ರೈತರಿಂದ ಖರೀದಿಸಿದೆ.
ರೈತರ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಅಧಿಕೃತ ಅಂಕಿ-ಅಂಶ, ಮಾಹಿತಿಯ ಪ್ರಕಾರ, ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸಾಧನೆಗಳ ಪೈಕಿ, ರೈತರ ಜೀವನವನ್ನು ಬದಲಾವಣೆ ಮಾಡುವುದು ಹಾಗೂ ಸ್ವಾವಲಂಬಿಗಳನ್ನಾಗಿಸಿರುವುದಾಗಿದೆ ಎಂದು ಐಎಎನ್ಎಸ್ ವರದಿ ಪ್ರಕಟಿಸಿದೆ.
ರೈತರ ಸಂಕಷ್ಟಗಳನ್ನು ಅಮೂಲಾಗ್ರವಾಗಿ ಅರಿತುಕೊಂಡು, ತಳಮಟ್ಟದಿಂದ ಅವುಗಳನ್ನು ಬಗೆಹರಿಸಲು, ಸರ್ಕಾರ-ರೈತರು ಇಬ್ಬರಿಗೂ ಒಳಿತಾಗುವ ನಿಟ್ಟಿನಲ್ಲಿ ನವೀನ ಮಾದರಿಯ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು ಎನ್ನುತ್ತದೆ ರೈತರೆಡೆಗೆ ಮೋದಿ ಕಾರ್ಯವೈಖರಿಯನ್ನು ವಿವರಿಸಿರುವ ಐಎಎನ್ಎಸ್ ವರದಿ
ಒಂದೆಡೆ ಕೇಂದ್ರ ಸರ್ಕಾರ ಎಂಎಸ್ ಪಿ ಗಳನ್ನು ಘೋಷಿಸುತ್ತಿದ್ದರೂ ಸಹ ರೈತರಿಂದ ಖರೀದಿಸುವುದು ಕಡಿಮೆಯಾಗಿರುತ್ತಿತ್ತು. ಸಾಲ ಮನ್ನಾ ಘೋಷಣೆ ಮಾಡುತ್ತಿದ್ದರು. ಆದರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅದ್ಯಾವುದೂ ತಲುಪುತ್ತಿರಲಿಲ್ಲ. ಇತ್ತ ಮೋದಿ ಸಿಎಂ ಆಗಿದ್ದಾಗಿನಿಂದಲೂ ಕೃಷಿ ಸುಧಾರಣೆಗಾಗಿ ಡಾ. ಸ್ವಾಮಿನಾಥನ್ ಅವರ ಶಿಫಾರಸ್ಸುಗಳನ್ನು ಜಾರಿಗೆ ತರುತ್ತಿದ್ದರು.
ಪ್ರಧಾನಿಯಾದ ಬಳಿಕ ಮೋದಿ ಹಂತ-ಹಂತವಾಗಿ ಕೃಷಿ ಕ್ಷೇತ್ರದ ಸುಧಾರಣೆಯನ್ನು ಕೈಗೆತ್ತಿಕೊಂಡಿದ್ದು, ಎಂಎಸ್ ಪಿ ಗಳನ್ನು ಕ್ರಮೇಣ ಏರಿಕೆ ಮಾಡುತ್ತಾ ಬಂದಿದ್ದಷ್ಟೇ ಅಲ್ಲದೇ ರೈತರಿಂದ ಸರ್ಕಾರ ಖರೀದಿಸುತ್ತಿರುವ ಪ್ರಮಾಣವನ್ನೂ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎನ್ನುತ್ತಿದೆ ಐಎಎನ್ಎಸ್ ನ ವರದಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ