'ಮುಕ್ತ ಮನಸ್ಸಿನ' ಮಾತುಕತೆಗೆ ದಿನಾಂಕ ಆಯ್ಕೆ ಮಾಡಿ: ರೈತರಿಗೆ ಕೇಂದ್ರ ಸರ್ಕಾರ ಆಹ್ವಾನ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಮ್ಯಾರಥಾನ್ ಪ್ರತಿಭಟನೆಯನ್ನು ಶತಾಯಗತಾಯ ನಿಲ್ಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಸಂಧಾನ ಮಾತುಕತೆಗೆ ದಿನಾಂಕ ಆಯ್ಕೆ ಮಾಡುವಂತೆ ಮನವಿ ಮಾಡಿದೆ.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
Updated on

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಮ್ಯಾರಥಾನ್ ಪ್ರತಿಭಟನೆಯನ್ನು ಶತಾಯಗತಾಯ ನಿಲ್ಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಸಂಧಾನ ಮಾತುಕತೆಗೆ ದಿನಾಂಕ ಆಯ್ಕೆ ಮಾಡುವಂತೆ ಮನವಿ ಮಾಡಿದೆ.

ಹೌದು.. ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಹರ್ಯಾಣ ಗಡಿ ಪ್ರದೇಶ ಸೇರಿದಂತೆ ದೇಶದ್ಯಾಂತ ರೈತ ಸಂಘಟನೆಗಳು ವ್ಯಾಪಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಹಿಂದೆ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ   ಹಲವು ಸಂಧಾನ ಸಭೆಗಳು ವಿಫಲವಾಗಿದ್ದು, ಸಂಘಟನೆಗಳು ಕೃಷಿ ಕಾನೂನು ಹಿಂದಕ್ಕೆ ಪಡೆಯದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಹೇಳಿವೆ. 

ಹೀಗಾಗಿ ಮುಂದಿನ ಸುತ್ತಿನ ಮಾತುಕತೆಗಾಗಿ ಅನುಕೂಲಕರ ದಿನಾಂಕವನ್ನು ಆಯ್ಕೆ ಮಾಡುವಂತೆ ಸರ್ಕಾರವು ಭಾನುವಾರ ಪ್ರತಿಭಟನಾ ನಿರತ ರೈತ ಸಂಘಟನೆಗಳನ್ನು ಕೋರಿದೆ. ಅಲ್ಲದೆ ಹೊಸ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ತರಬೇಕಾದ ಅಂಶಗಳ ಬಗ್ಗೆ ಸ್ಪಷ್ಟವಾಗಿ  ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರ ರೈತ ಪರ ಸಂಘಟನೆಗಳಿಗೆ ಮನವಿ ಮಾಡಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು, 40 ರೈತ ಸಂಘಟನೆಯ ಮುಖಂಡರಿಗೆ ಪತ್ರವನ್ನು ಬರೆದಿದ್ದು,  ರೈತರಿಗೆ ಎದ್ದಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರವು 'ಮುಕ್ತ ಮನಸ್ಸಿ'ನ ಮಾತುಕತೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

ವಿವಾದಾತ್ಮಕ ಮೂರು ಕಾನೂನುಗಳನ್ನು ರದ್ದುಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ರೈತರು ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಟಿಕಾಣಿ ಹೂಡಿದ್ದು, ರೈತರ ಒಕ್ಕೂಟದ ನಡುವಣ ಐದು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಅಸ್ತಿತ್ವದಲ್ಲಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)  ವ್ಯವಸ್ಥೆ ಮುಂದುವರಿಯಲಿದೆ ಎಂದು ರೈತರಿಗೆ 'ಲಿಖಿತ ಭರವಸೆ' ನೀಡುವುದು ಸೇರಿದಂತೆ ಕನಿಷ್ಠ ಏಳು ವಿಷಯಗಳ ಬಗ್ಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಲು ಡಿಸೆಂಬರ್ 9ರಂದು ಕಳುಹಿಸಲಾದ ಕರಡು ಪ್ರಸ್ತಾವನೆಯಲ್ಲಿ ಸರ್ಕಾರ ಪ್ರಸ್ತಾಪಿಸಿದೆ ಎಂದು ಅಗರ್ವಾಲ್ ಹೇಳಿದರು.

ಆದರೆ ಈ ಎಲ್ಲ ಪ್ರಸ್ತಾವನೆಗಳನ್ನು ರೈತ ಸಂಘಟನೆಗಳನ್ನು ನಿರಾಕರಿಸಿತ್ತು. ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ರೈತ ಸಂಘಟನೆಯ ನಾಯಕರು ಕರಡು ಪ್ರಸ್ತಾವನೆಯಲ್ಲಿ ಉಳಿದಿರುವ ಆತಂಕ ಹಾಗೂ ಅನುಮಾನಗಳ ಬಗ್ಗೆ ವಿವರವನ್ನು ಒದಗಿಸಬೇಕು ಮತ್ತು ಮುಂದಿನ ಸುತ್ತಿನ  ಮಾತುಕತೆಗೆ ಅನುಕೂಲವಾಗುವಂತೆ ದಿನಾಂಕವನ್ನು ಸೂಚಿಸಬೇಕು ಎಂದು ಅಗರ್ವಾಲ್ ವಿನಂತಿಸಿದರು. ಸಮಸ್ಯೆ ಇತ್ಯರ್ಥಗೊಳಿಸಲು ಮುಂದಿನ ಸಭೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ ಪ್ರತಿಭಟನೆಗಳು ಬೇಗನೇ ಕೊನೆಗೊಳ್ಳಲಿದೆ  ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಸರ್ಕಾರವು ಇತರೆ ಹಲವಾರು ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಅವರ ಸಲಹೆಗಳನ್ನು ಕೋರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com