ರೂಪಾಂತರಿ ಕೊರೋನಾ ವೈರಸ್ ವಿರುದ್ಧ ಹಾಲಿ ಲಸಿಕೆಗಳು ಕಾರ್ಯ ನಿರ್ವಹಿಸುವುದಿಲ್ಲ ಎನ್ನಲು ಯಾವುದೇ ಆಧಾರಗಳಿಲ್ಲ: ಕೇಂದ್ರ ಸರ್ಕಾರ!

ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿರುದ್ಧ ಹಾಲಿ ಲಸಿಕೆಗಳು ಕಾರ್ಯ ನಿರ್ವಹಿಸುವುದಿಲ್ಲ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿರುದ್ಧ ಹಾಲಿ ಲಸಿಕೆಗಳು ಕಾರ್ಯ ನಿರ್ವಹಿಸುವುದಿಲ್ಲ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋವಿಡ್-19 ಸೋಂಕಿಗೆ ಸಿದ್ಧವಾಗಿರುವ ಲಸಿಕೆಗಳು ಸೋಂಕಿನ ವಿರುದ್ಧ ಕಾರ್ಯ ನಿರ್ವಹಿಸಲಿವೆ. ಬ್ರಿಟನ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ SARS-CoV-2 ರೂಪಾಂತರಿ ಕೋವಿಡ್ ಸೋಂಕಿನ ವಿರುದ್ಧ  ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು  ಕೇಂದ್ರ  ಸರ್ಕಾರ ಹೇಳಿದೆ. 

ಈ ಕುರಿತಂತೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಅವರು, ಹೊಸ ರೂಪಾಂತರ ಕೊರೋನಾ ಸೋಂಕು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಇದುವರೆಗೂ ಕಂಡುಬಂದಿಲ್ಲ. ಬ್ರಿಟನ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ  ಕೋವಿಡ್-19 ರೂಪಾಂತರ ವೈರಸ್ ಗಳಿಂದ ರಕ್ಷಿಸಲು ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೋಟೀನ್‌ ಅನ್ನು ಗುರಿಯಾಗಿರಿಸಿಕೊಳ್ಳುತ್ತವೆ, ಇದರಲ್ಲಿ ರೂಪಾಂತರಗಳಲ್ಲಿ ಬದಲಾವಣೆಗಳಿವೆ. ಆದರೆ ಲಸಿಕೆಗಳು ನಮ್ಮ ರೋಗನಿರೋಧಕ  ಶಕ್ತಿಯನ್ನು ಮತ್ತು ರಕ್ಷಣಾತ್ಮಕ ಪ್ರತಿಕಾಯಗಳು ವ್ಯಾಪಕ ಶ್ರೇಣಿಯನ್ನು ಉತ್ಪಾದಿಸಲು ಉತ್ತೇಜಿಸುತ್ತವೆ ಎಂದು ಹೇಳಿದರು. 

ಅಂತೆಯೇ ಇದೇ ವಿಚಾರವಾಗಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪಾಲ್ ಅವರು, 'ಹೊಸ ಕೋವಿಡ್-19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ. ದೇಶದಲ್ಲಿ ಪ್ರಸ್ತುತ ವರದಿಯಾಗುತ್ತಿರುವ ಹೊಸ ಕೋವಿಡ್-19 ಸೋಂಕು ಪ್ರಕರಣಗಳು,  ಸಕ್ರಿಯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲೂ ನಿರಂತರ ಇಳಿಕೆಯಾಗುತ್ತಿದೆ. ಚಳಿಗಾಲದ ಸಂದರ್ಭದಲ್ಲಿ ಜನಸಂಖ್ಯೆಯ ಬಹುಪಾಲು ಜನರು ಇನ್ನೂ ಸೋಂಕಿಗೆ ಒಳಗಾಗುತ್ತಾರೆ. ಬ್ರಿಟನ್ ರೂಪಾಂತರಿ ವೈರಸ್ ಜಗತ್ತಿನ ಇತರೆ ದೇಶಗಳಂತೆ ಭಾರತಕ್ಕೂ ಪ್ರಯಾಣಿಸಿದೆ. ಅದರ ಪ್ರಸರಣದ ವೇಗ  ಗಣನೀಯವಾಗಿ ಹೆಚ್ಚಾಗಿದ್ದು, ನಾವು ಈ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದರು.

ಇನ್ನು ಕೊರೋನಾ ವೈರಸ್ ಸೋಂಕಿಗೆ ಒಳಗಾದವರ ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ದೇಶದಲ್ಲಿ ಒಟ್ಟು ಪ್ರಕರಣ ಅಥವಾ ಒಟ್ಟಾರೆ ಸೋಂಕಿತರ ಪೈಕಿ ಶೇ.63 ರಷ್ಟು ಪುರುಷರು ಮತ್ತು ಶೇ.37ರಷ್ಟು ಮಹಿಳೆಯರು ಸೋಂಕಿಗೆ  ತುತ್ತಾಗಿದ್ದಾರೆ. ಅಂತೆಯೇ ಶೇ.8ರಷ್ಟು ಸೋಂಕಿತರು 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಶೇ.13ರಷ್ಟು ಸೋಂಕಿತರು 18-25 ವರ್ಷ ವಯಸ್ಸಿನವರಾಗಿದ್ದಾರೆ. ಶೇ.39ರಷ್ಟು ಸೋಂಕಿತರು 26-44 ವರ್ಷ ವಯಸ್ಸಿನವರಾಗಿದ್ದಾರೆ. ಶೇ.26ರಷ್ಟು ಸೋಂಕಿತರು 45-60 ವರ್ಷದವರಾಗಿದ್ದು, 60 ವರ್ಷಕ್ಕಿಂತ  ಮೇಲ್ಪಟ್ಟವರ ಗುಂಪಿನಲ್ಲಿ ಶೇ.14ರಷ್ಟು ಸೋಂಕಿತರಿದ್ದಾರೆ ಎಂದು ಹೇಳಿದರು.

ಇದೇ ವೇಳೆ ದೇಶದಲ್ಲಿ ಉಂಟಾದ ಒಟ್ಟಾರೋ ಕೋವಿಡ್-19 ಸಾವುಗಳ ಪೈಕಿ ಶೇ.70ರಷ್ಟು ಪುರುಷರದ್ದಾಗಿದ್ದು, ಈ ಪೈಕಿ ಶೇ.45ರಷ್ಟು ಸಾವುಗಳು  60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ವರದಿಯಾಗಿದೆ. ಪ್ರಸ್ತುತ ದೇಶದಲ್ಲಿ 2.7 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಸಕಾರಾತ್ಮಕ ದರವು  (positivity rate)ಶೇ. 6.02 ರಷ್ಟಿದೆ. ಕಳೆದ ವಾರದಲ್ಲಿ ಈ ದರ ಶೇ.2.25ರಷ್ಟಿತ್ತು. ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.60ರಷ್ಟು ಪಾಲು ದೇಶದ 5 ರಾಜ್ಯಗಳದ್ದಾಗಿದೆ. ಈ ರಾಜ್ಯಗಳಾವುವು ಎಂದರೆ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ಎಂದು ಭೂಷಣ್  ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com