
ನವದೆಹಲಿ: ತಮ್ಮ ಸರ್ಕಾರ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ತೆರಿಗೆ ಪಾವತಿದಾರರಿಗೆ ನೀಡುತ್ತಿದ್ದು, ಕಾನೂನು ತೊಡಕು, ಇತ್ಯಾದಿ ತಕರಾರುಗಳನ್ನು ಬಗೆಹರಿಸಿಕೊಳ್ಳಲು ಇದು ಸಹಕಾರಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸಂಸತ್ ನಲ್ಲಿ ಇಂದು 2020ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, 'ತೆರಿಗೆ ಪಾವತಿಗೆ ಅತ್ಯಂತ ಸುಲಭ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸರ್ಕಾರ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ತೆರಿಗೆ ಪಾವತಿದಾರರಿಗೆ ನೀಡುತ್ತಿದೆ. ಕಾನೂನು ತೊಡಕು, ಇತ್ಯಾದಿ ತಕರಾರುಗಳನ್ನು ಬಗೆಹರಿಸಿಕೊಳ್ಳಲು ಇದು ಸಹಕಾರಿ ಎಂದು ಹೇಳಿದರು.
ಅಂತೆಯೇ ಆದಾಯ ತೆರಿಗೆ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವ ಮೂಲಕ ತೆರಿಗೆದಾರರಿಗೆ ಅನುಕೂಲವಾಗಲಿದೆ. ಅಂತೆಯೇ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ತರಲು ಬದ್ಧ ಎಂದ ನಿರ್ಮಲಾ, ಈ ವರ್ಷ 4.83 ಲಕ್ಷ ತೆರಿಗೆ ಪ್ರಕರಣಗಳು ವಿವಿಧೆಡೆ ಬಾಕಿ ಉಳಿದಿವೆ. ನೇರ ತೆರಿಗೆಯಲ್ಲಿಯೂ ತಕರಾರು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಮಾರ್ಚ್ 2020ರ ಒಳಗೆ ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಜೂನ್ 2020ರ ಒಳ ತೆರಿಗೆ ಪಾವತಿಸುವವರಿಗೆ ಕೊಂಚ ದಂಡ ಇರುತ್ತದೆ. ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಹೇಳಿದರು.
ಇನ್ನು ಆಧಾರ್ ಮೂಲಕ ಪಾನ್ ಕಾರ್ಡ್ ಹೊಂದಲು ಅವಕಾಶ ಕಲ್ಪಿಸುವುದಾಗಿ ಹೇಳಿದ ನಿರ್ಮಲಾ ಸೀತಾರಾಮನ್, ಆಧಾರ್ ಜೊತೆಗೆ ತ್ವರಿತ ಪ್ಯಾನ್ ಕಾರ್ಡ್ ಹೊಂದಲೂ ಅವಕಾಶ ಸಿಗುವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಅಲ್ಲದೆ ವೈಯಕ್ತಿಕ ಆದಾಯ ತೆರಿಗೆಯನ್ನು ಇತಿಹಾಸದಲ್ಲಿಯೇ ಅತಿಕಡಿಮೆ ಮಾಡಿದ್ದೇವೆ. ಡಿಡಿಟಿಯನ್ನು ಕಂಪನಿಗಳ ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದೇವೆ. ಜಿಎಸ್‌ಟಿ ಸುಧಾರಣೆ ಯತ್ನಗಳು ಮುಂದುವರಿದಿವೆ. ಎಸ್‌ಎಂಎಸ್ ಆಧಾರದ ಜಿಎಸ್‌ಟಿ ರಿಟರ್ನ್‌ಗೆ ಯೋಚಿಸಿದ್ದೇವೆ. ಆಧಾರ್ ಆಧರಿತ ತೆರಿಗೆ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡುತ್ತೇವೆ. ಅಸ್ತಿತ್ವದಲ್ಲಿಲ್ಲದ ಘಟಕಗಳನ್ನು ತೋರಿಸಿ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಇದು ತಡೆಯೊಡ್ಡಲಿದೆ ಎಂದು ಹೇಳಿದರು.
ಸೂಕ್ಷ್ಮ, ಆಕ್ಷೇಪಾರ್ಹ ವಸ್ತುಗಳ ಆಮದಿಗೆ ಕಡಿವಾಣ ಹಾಕಲು ಕ್ರಮ ಜರುಗಿಸುತ್ತೇವೆ. ದೇಶೀಯ ಕೈಗಾರಿಕೆಗಳ ಹಿತ ಕಾಪಾಡಲು ಆಮದು ಶುಲ್ಕ ವಿಧಿಸುವುದು ಅನಿವಾರ್ಯವಾಗುತ್ತೆ. ಅದು ರೂಪುರೇಷೆಗಳನ್ನು ನಿರ್ಧರಿಸುತ್ತೇವೆ. ಇಂಥ ನಿಯಮಗಳು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಯೇ ಇರುತ್ತವೆ. ಕಸ್ಟಮ್ಸ್ ಲಾ (ಸೀಮಾ ಸುಂಕ) ಸುಧಾರಣೆಗೆ ಸಂಬಂಧಿಸಿದಂತೆ ಜನರು ಮುಕ್ತವಾಗಿ ಸಲಹೆಗಳನ್ನು ಕೊಡಬಹುದು. ಮೇಕ್ ಇನ್ ಇಂಡಿಯಾ ಯೋಜನೆಯ ಲಾಭ ಈಗ ಸಿಗುತ್ತಿದೆ. ಭಾರತ ಈಗ ವಿಶ್ವದರ್ಜೆಯ ವಸ್ತುಗಳನ್ನು ಉತ್ಪಾದಿಸಿ, ರಫ್ತು ಮಾಡುತ್ತಿದೆ.
Advertisement