ಅನಂತ ಕುಮಾರ್ ಹೆಗಡೆ ಹೇಳಿಕೆ: ಲೋಕಸಭೆಯಲ್ಲಿ ಗದ್ದಲ, ಕಲಾಪದಿಂದ ಹೊರನಡೆದ ಕಾಂಗ್ರೆಸ್ ಸದಸ್ಯರು

ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಮಹಾತ್ಮಾ ಗಾಂಧಿ ಕುರಿತು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿ ವಿರೋಧ ಪಕ್ಷಗಳ ನಾಯಕರು ಮಂಗಳವಾರ ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಗಿದೆ.
ಅನಂತ ಕುಮಾರ್ ಹೆಗಡೆ ಹೇಳಿಕೆ: ಲೋಕಸಭೆಯಲ್ಲಿ ಗದ್ದಲ, ಕಲಾಪದಿಂದ ಹೊರನಡೆದ ಕಾಂಗ್ರೆಸ್ ಸದಸ್ಯರು

ನವದೆಹಲಿ: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಮಹಾತ್ಮಾ ಗಾಂಧಿ ಕುರಿತು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿ ವಿರೋಧ ಪಕ್ಷಗಳ ನಾಯಕರು ಮಂಗಳವಾರ ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಗಿದೆ. ಕಾಂಗ್ರೆಸ್ ಸಂಸದರು ಕಲಾಪ ತೊರೆದು ಸದನದಲ್ಲಿ ಹೊರನಡೆದ ಪ್ರಸಂಗ ಕೂಡ ನಡೆಯಿತು.


ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಒಮನ್ ನ ದಿವಂಗತ ಸುಲ್ತಾನ ಖಬೂಸ್ ಬಿನ್ ಸೈಯದ್ ಅಲ್ ಸೈಯದ್ ಅವರಿಗೆ ಸಹ ಸದನದಲ್ಲಿ ಗೌರವ ಸೂಚಿಸಲಾಯಿತು. 


ಇದು ಮುಗಿಯುತ್ತಿದ್ದಂತೆ ಸದನದಲ್ಲಿ ಗದ್ದಲೆ, ಪ್ರತಿಭಟನೆ ಜೋರಾದವು. ಕಾಂಗ್ರೆಸ್, ಡಿಎಂಕೆ, ಎನ್ ಸಿಪಿ ನಾಯಕರು ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಪ್ರಸ್ತಾಪಿಸಿದರು. ಆದರೆ ಸ್ಪೀಕರ್ ಓಂ ಬಿರ್ಲಾ ಚರ್ಚೆಗೆ ಅವಕಾಶ ನೀಡಲಿಲ್ಲ.


ಈ ಸಂದರ್ಭದಲ್ಲಿ ತಿರುಗೇಟು ನೀಡಿದ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಭಾರತೀಯ ಜನತಾ ಪಾರ್ಟಿಯ ಸದಸ್ಯರಾದ ನಾವು ನಿಜವಾದ ಭಕ್ತರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಗಳು. ಇಲ್ಲಿರುವವರು ನಕಲಿ ಗಾಂಧಿಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಅನುಯಾಯಿಗಳು ಎಂದು ಕಾಂಗ್ರೆಸ್ ಸಂಸದರೆಡೆಗೆ ಕೈತೋರಿಸಿದರು. 


ಆಗ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಅನಂತ್ ಕುಮಾರ್ ಹೆಗಡೆ ಅವರು ರಾವಣನ ಪುತ್ರ ಎಂದರು. ಆಗ ಗದ್ದಲ, ಕೋಲಾಹಲ ತೀವ್ರವಾಯಿತು. 


ಕೆಲ ಕಾಂಗ್ರೆಸ್ ಸಂಸದರು ಸದನದಲ್ಲಿ 'ಬಿಜೆಪಿ ಪಾರ್ಟಿ ಗೋಡ್ಸೆ ಪಾರ್ಟಿ', 'ಮಹಾತ್ಮಾ ಗಾಂಧಿ, ಅಮರ್ ರಹೆ' ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದರು. ಇಷ್ಟೆಲ್ಲಾ ಗದ್ದಲ, ಕೋಲಾಹಲಗಳಿಂದ ಕಲಾಪ ಮುಂದುವರಿಸಲಾಗದೆ ಸ್ಪೀಕರ್ ಮಧ್ಯಾಹ್ನದವರೆಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com