ಪ್ರತಿಭಟನೆ ಮಾಡಿ, ಆದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಕೊಡಬೇಡಿ: ಶಹೀನ್ ಬಾಗ್ ಪ್ರತಿಭಟನೆಗೆ 'ಸುಪ್ರೀಂ' ಆಕ್ಷೇಪ

ಶಹೀನ್ ಬಾಗ್ ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಮಾಡಬಾರದೆಂದು ತರಾಟೆಗೆ ತೆಗೆದುಕೊಂಡಿದೆ. 
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಹೀನ್ ಬಾಗ್ ನಲ್ಲಿ ಪ್ರತಿಭಟನಾನಿರತರು
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಹೀನ್ ಬಾಗ್ ನಲ್ಲಿ ಪ್ರತಿಭಟನಾನಿರತರು

ನವದೆಹಲಿ: ಶಹೀನ್ ಬಾಗ್ ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಮಾಡಬಾರದೆಂದು ತರಾಟೆಗೆ ತೆಗೆದುಕೊಂಡಿದೆ. 


ನ್ಯಾಯಮೂರ್ತಿ ಎಸ್ ಕೆ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಪ್ರತಿಭಟನೆಗೆ ನಿಗದಿಪಡಿಸಿರುವ ಪ್ರದೇಶಗಳಲ್ಲಿ ಅದನ್ನು ಮಾಡಬೇಕು. ಅದು ಬಿಟ್ಟು ಎಲ್ಲೆಂದರಲ್ಲಿ ಪ್ರತಿಭಟನೆ ಮಾಡಲು ಆರಂಭಿಸಿದರೆ ಪರಿಸ್ಥಿತಿ ಏನಾಗಬಹುದು ಎಂದು ಕೇಳಿದೆ.


ಈ ಕೇಸಿನಲ್ಲಿ ಮಧ್ಯಂತರ ಪರಿಹಾರ ನೀಡಬೇಕೆಂದು ಕೇಳಿಬರುತ್ತಿರುವ ಒತ್ತಾಯಕ್ಕೆ ಸಂಬಂಧಪಟ್ಟಂತೆ ನ್ಯಾಯಪೀಠ, ಯಾವುದೇ ಆದೇಶ ನೀಡುವ ಮುನ್ನ ಸರ್ಕಾರ ಏನು ಹೇಳುತ್ತದೆ ಎಂದು ಮೊದಲು ಕೇಳಬೇಕು. ನೀವು 50 ದಿನ ಕಾದಿದ್ದೀರಂತೆ, ಇನ್ನು ಒಂದು ವಾರ ಕಾಯಲು ಸಾಧ್ಯವಿಲ್ಲವೇ ಎಂದು ಹೇಳಿ ನ್ಯಾಯಪೀಠ ಫೆಬ್ರವರಿ 17ಕ್ಕೆ ವಿಚಾರಣೆಯನ್ನು ಮುಂದೂಡಿತು.


ಶಹೀನ್ ಬಾಗ್ ನಲ್ಲಿನ ಸಿಎಎ ವಿರುದ್ಧ ಪ್ರತಿಭಟನೆಗೆ ಸಂಬಂಧಪಟ್ಟಂತೆ ಅಡ್ವೊಕೇಟ್ ಅಮಿತ್ ಸಹ್ನಿ ಮತ್ತು ಬಿಜೆಪಿ ನಾಯಕ ನಂದ್ ಕಿಶೋರ್ ಗಾರ್ಗ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಶಹೀನ್ ಬಾಗ್ 13ಎ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ, ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ರಸ್ತೆ ತಡೆ ಮತ್ತು ಸಂಚಾರ ಬದಲಾವಣೆಯಿಂದ ಜನರ ಸಮಯ, ಶಕ್ತಿ, ಇಂಧನ ವೃಥಾ ವ್ಯಯವಾಗುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.


ದೆಹಲಿಯ ಕಳಿಂದಿ ಕುಂಜ್ ರಸ್ತೆ ದೆಹಲಿ, ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದು ಪ್ರತಿನಿತ್ಯ ಈ ರಸ್ತೆಯಲ್ಲಿ ಲಕ್ಷಾಂತರ ಮಂದಿ ಸಂಚರಿಸುತ್ತಾರೆ.ಪ್ರತಿಭಟನೆ ಹೆಸರಿನಲ್ಲಿ ಇದೀಗ ರಸ್ತೆ ತಡೆ ಮಾಡಿರುವುದರಿಂದ ಪ್ರಯಾಣಿಕರಿಗೆ ಮತ್ತು ಸುತ್ತಮುತ್ತಲ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ.ಜನರಿಗೆ ಪ್ರತಿಭಟನೆ ಮಾಡುವ ಹಕ್ಕು ಇರುವಂತೆ ಸಾರ್ವಜನಿಕ ಬಳಕೆ ರಸ್ತೆಗಳನ್ನು ಅನಿರ್ದಿಷ್ಟಾವಧಿಯವರೆಗೆ ತಡೆದು ಪ್ರತಿಭಟನೆ ಮಾಡುವ ಹಕ್ಕು ಇರುವುದಿಲ್ಲವಲ್ಲ ಎಂದು ಅರ್ಜಿದಾರರು ಕೋರ್ಟ್ ನಲ್ಲಿ ವಾದಿಸಿದ್ದಾರೆ.

ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ನೊಟೀಸ್: ಕೆಲ ದಿನಗಳ ಹಿಂದೆ ಶಹೀನ್ ಬಾಗ್ ಪ್ರತಿಭಟನೆ ವೇಳೆ ನಾಲ್ಕು ತಿಂಗಳ ಮಗು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಪ್ರತಿಭಟನೆ, ಪ್ರದರ್ಶನ ವೇಳೆ ಮಕ್ಕಳನ್ನು, ಶಿಶುಗಳನ್ನು ಬಳಸಿಕೊಳ್ಳಬಾರದೆಂದು ಕೋರಿ ಶೌರ್ಯ ಪ್ರಶಸ್ತಿ ವಿಜೇತ ಬಾಲಕನೊಬ್ಬ ಸಲ್ಲಿಸಿದ ಪತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com