ಕರ್ನೂಲ್: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸುತ್ತಿರುವವರು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ನಿಜವಾದ ಅನುಯಾಯಿಗಳು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಹೇಳಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಧರ್ಮದ ಆಧಾರದ ಮೇಲೆ ಕಾನೂನು ರಚನೆಗೊಂಡಿರುವುದು ನಮ್ಮ ದೇಶದ 70 ವರ್ಷಗಳ ಸಂಸತ್ತಿನಲ್ಲಿಯೇ ಇದೇ ಮೊದಲು. ಧರ್ಮದ ಆಧಾರದ ಮೇಲೆ ಸಂಸತ್ತಿನಲ್ಲಿ ಎಂದಿಗೂ ಕಾನೂನು ಜಾರಿಯಾಗಿರಲಿಲ್ಲ. ಇದು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ಇದರಂತೆ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಓವೈಸಿ, ಸಿಎಎ ವಿರುದ್ಧ ದನಿ ಎತ್ತುತ್ತಿರುವವರು ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ನಿಜವಾದ ಅನುಯಾಯಿಗಳಾಗಿದ್ದಾರೆ. ನಾವು ನಮ್ಮ ಪೌರತ್ವನ್ನು ಪತ್ರಗಳಲ್ಲಿ ನೀಡುವುದಿಲ್ಲ. ದೇಶ ತೊರೆಯುವಂತೆ ಸರ್ಕಾರ ಮುಸ್ಲಿಮರ ಮೇಲೆ ಒತ್ತಡ ಹೇರುವಂತಿಲ್ಲ. ಈ ದೇಶದಲ್ಲಿ ಎಲ್ಲವನ್ನೂ ಹೊಂದಿದ್ದೇನೆ. ನಾನು ಭಾರತವನ್ನು ತೊರೆಯುವುದಿಲ್ಲ. ದಾಖಲೆಗಳನ್ನೂ ನೀಡುವುದಿಲ್ಲ. ದಾಖಲೆ ತೋರಿಸಬೇಕಾದ ದಿನ ಬಂದಿದ್ದೇ ಆದರೆ, ನಮ್ಮ ಹೃದಯಗಳ ಮೇಲೆ ಗುಂಡು ಹಾರಿಸುವಂತೆ ತಿಳಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತದ ಮೇಲೆ ಪ್ರೀತಿಯಿದೆ. ಅದು ಈ ಸರ್ಕಾರಕ್ಕೆ ಎಂದಿಗೂ ಅರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Advertisement